ಬಂದ್, ಪ್ರತಿಭಟನೆ ವೇಳೆ ಆಗಿರುವ ನಷ್ಟ-ಪಟ್ಟಿ ಮಾಡಿ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು, ಸೆ.12- ರಾಜ್ಯದಲ್ಲಿ ಬಂದ್, ಪ್ರತಿಭಟನೆ ವೇಳೆ ಆಗಿರುವ ನಷ್ಟವನ್ನು ಪಟ್ಟಿ ಮಾಡಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಬಂದ್, ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಬಂಧ ಹೇರುವಂತೆ ಕೋರಿ ಸಾರ್ವಜನಿಕ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಖಾ ಅವರು ಬಂದ್ ವೇಳೆ ಆಗಿರುವ ನಷ್ಟ ವಸೂಲಾತಿಗೆ ಆಯುಕ್ತರ ನೇಮಕ, ನಿವೃತ್ತ ನ್ಯಾಯಮೂರ್ತಿಗಳ ನೇಮಕಕ್ಕೆ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಂದ್ ವೇಳೆ ನಡೆದಿದ್ದ ಅಹಿತಕರ ಘಟನೆಗಳ ಬಗ್ಗೆ ಪಟ್ಟಿ ಮಾಡಲಾಗಿದೆ.ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನೆ ಶಾಂತಿಯುತವಾಗಿ ನಡೆದಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.

ಅರ್ಜಿದಾರ ಪರ ವಕೀಲ ಅಮೃತೇಶ್ ಅವರು ವಾದ ಮಂಡಿಸಿ ಕಳೆದ 10 ದಿನಗಳಿಂದ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕನಕಪುರ, ರಾಮನಗರದಲ್ಲಿ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹಚ್ಚಲಾಗಿದೆ. ಬಸ್‍ಗಳ ಮೇಲೆ ದಾಳಿಗಳಿಂದ 1.5 ಕೋಟಿ ನಷ್ಟವಾಗಿದೆ.ಬಂದ್‍ಗೆ ಕರೆ ನೀಡಿದ್ದ ರಾಜಕೀಯ ನಾಯಕರ ಮೇಲೆ ಕೇಸ್ ದಾಖಲಿಸಿಲ್ಲ ಎಂದು ಆರೋಪಿಸಿದರು.
ಈ ಕುರಿತು ದಾಖಲೆಗಳನ್ನು ಸಲ್ಲಿಸುವಂತೆ ಅಮೃತೇಶ್ ಅವರಿಗೆ ಸೂಚಿಸಿದ ವಿಭಾಗೀಯ ಪೀಠ ಸೋಮವಾರಕ್ಕೆ ಮುಂದೂಡಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ