ಮೈಸೂರು/ಬೆಂಗಳೂರು: ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಜಿ.ಟಿ. ದೇವೇಗೌಡ ಅವರು ಪಕ್ಷ ಬಿಡುತ್ತಾರೆ ಎಂಬ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿದೆ. ಜಿಟಿಡಿ ಕೂಡ ತಾನು ನಾಮಕಾವಸ್ತೆಯಲ್ಲಿ ಪಕ್ಷದಲ್ಲಿದ್ದೇನೆಂದು ಹಲವು ಬಾರಿ ಪರೋಕ್ಷವಾಗಿ ಹೇಳುತ್ತಲೇ ಬಂದಿದ್ದಾರೆ. ಈ ಸುದ್ದಿಗೆ ಇಂಬು ಕೊಡುವಂತೆ ಇವತ್ತು ಮೈಸೂರಿನಲ್ಲಿ ನಡೆಯುತ್ತಿರುವ ಜೆಡಿಎಸ್ ಪಕ್ಷದ ಚಿಂತನ ಮಂಥನ ಸಭೆಯಲ್ಲಿ ಜಿ.ಟಿ. ದೇವೇಗೌಡರು ಗೈರಾಗಿದ್ದಾರೆ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಈ ಸಭೆಗೆ ಬಂದರೂ ಜಿಟಿಡಿ ಆಗಮಿಸುವ ಆಸಕ್ತಿ ತೋರಿಲ್ಲ.
ಈ ಸಭೆ ನಡೆಯುವ ಬಗ್ಗೆ ತನಗೆ ಮಾಹಿತಿಯೇ ಇಲ್ಲ. ಆಹ್ವಾನವಿಲ್ಲದೇ ಸಭೆಗೆ ಹೋಗೋದು ಹೇಗೆ? ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕರೂ ಆಗಿರುವ ಜಿಟಿಡಿ ಪ್ರಶ್ನಿಸಿದ್ದಾರೆ. ಕುತೂಹಲದ ವಿಷಯವೆಂದರೆ ಸಭೆಯ ಬಗ್ಗೆ ಹೊರಡಿಸಲಾಗಿದ್ದ ಪತ್ರಿಕಾ ಪ್ರಕಟಣೆಯಲ್ಲಿ ಜಿಟಿಡಿ ಪಾಲ್ಗೊಳ್ಳುತ್ತಾರೆಂದು ತಿಳಿಸಲಾಗಿತ್ತು. ಆದರೆ, ಸ್ಥಳೀಯ ಮುಖಂಡರಾಗಲೀ, ವರಿಷ್ಠರಾಗಲೀ ಜಿಟಿಡಿ ಅವರಿಗೆ ಈ ಸಭೆಯ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲವಂತೆ. ಪಕ್ಷ ಬಿಡಲು ಹೊರಟಿರುವ ಜಿಟಿಡಿ ಅವರ ಉಸಾಬರಿಯೇ ಬೇಡ ಎಂದು ಜೆಡಿಎಸ್ ಅವರನ್ನು ನಿರ್ಲಕ್ಷಿಸುತ್ತಿದೆಯಾ ಎಂಬ ದಟ್ಟ ಅನುಮಾನವಂತೂ ಇದೆ.
ಜಿಟಿ ದೇವೇಗೌಡರೂ ಕೂಡ ಕುಮಾರಸ್ವಾಮಿ ಬರುವ ಮುನ್ನವೇ ತಮ್ಮದೇ ಪೂರ್ವನಿಗದಿತ ಪ್ರವಾಸಕ್ಕೆ ಹೊರಟಿದ್ದಾರೆ. ಹುಣಸೂರಿನಲ್ಲಿರುವ ಬಿಳಿಕೆರೆಗೆ ಜಿಟಿಡಿ ಭೇಟಿ ನೀಡುತ್ತಿದ್ದಾರೆ. ಅದಾದ ಬಳಿಕ ಅವರು ಬೆಂಗಳೂರಿಗೆ ತೆರಳಲಿದ್ದಾರೆ.
ಇದೇ ವೇಳೆ, ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಬೆಳಗ್ಗೆ 10 ಗಂಟೆಗೆ ಈ ಜೆಡಿಎಸ್ ಸಭೆ ಪ್ರಾರಂಭವಾಗಿದೆ. ಹುಣಸೂರು ಕ್ಷೇತ್ರ ಸೇರಿದಂತೆ ಮುಂಬರುವ ಕೆಲ ಉಪಚುನಾವಣೆಗಳು, ಪಕ್ಷ ಸಂಘಟನೆ ಇತ್ಯಾದಿಗಳಿಗೆ ಅಣಿಯಾಗುವ ನಿಟ್ಟಿನಲ್ಲಿ ಚರ್ಚೆ ನಡೆಸಲು ಈ ಸಭೆ ಆಯೋಜಿಸಲಾಗಿದೆ. ಹೆಚ್.ಡಿ. ಕುಮಾರಸ್ವಾಮಿ ಹಾಗೂ ಇತರ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಈ ಸಭೆಯಲ್ಲಿ ಪಾಲ್ಗೊಂಡಿದ್ಧಾರೆ.
ಅತ್ತ, ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಜಿಟಿಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಬಗ್ಗೆ ಅಸಮಾಧಾನಗೊಂಡು ತೊರೆಯಲು ಸಿದ್ಧವಾಗಿರುವ ಜಿಟಿಡಿ ಅವರ ಕಣ್ಮುಂದೆಯೇ ಪಕ್ಷವನ್ನು ಮತ್ತೆ ಕಟ್ಟಿ ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಪ್ರಧಾನಿಗಳು ಸವಾಲು ಹಾಕಿದ್ದಾರೆ.