ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಭಾರತವನ್ನು ತಿರುಗಿ ನೋಡುವಂತೆ ಮಾಡಿದ ಇಸ್ರೋ ಚಂದ್ರಯಾನ – 2, ಕಡೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿತ್ತು. ಆದರೆ ಚಂದ್ರಯಾನ್ – 2 ಲ್ಯಾಂಡರ್ ‘ವಿಕ್ರಂ‘ ಇದೀಗ ಸುಸ್ಥಿತಿಯಲ್ಲಿದೆ ಎಂಬ ಮಾಹಿತಿಯನ್ನು ಇಸ್ರೋ ನೀಡಿದೆ.
ಈ ಮೂಲಕ ಲ್ಯಾಂಡರ್ ವಿಕ್ರಂ ಜತೆ ಸಂಪರ್ಕ ಸಾಧಿಸುವ ಇಸ್ರೋ ಪ್ರಯತ್ನಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಂತಾಗಿದೆ. 2.1 ಕಿಲೋಮೀಟರ್ ದೂರದಲ್ಲಿದ್ದಾಗ, ವಿಕ್ರಂ ಸಂಪರ್ಕವನ್ನು ಕಳೆದುಕೊಂಡಿತ್ತು. ಇದರಿಂದ ಇಸ್ರೋ ವಿಜ್ಞಾನಿಗಳಿಗೆ ಮತ್ತು ದೇಶದ ಜನರಿಗೆ ಭಾರೀ ನಿರಾಸೆ ಉಂಟಾಗಿತ್ತು. ಆದರೆ ಸಂತಸದ ವಿಚಾರವೆಂದರೆ ವಿಕ್ರಂಗೆ ಯಾವುದೇ ರೀತಿಯಾದ ಹಾನಿಯಾಗಿಲ್ಲ. ವಾಲಿದ ಸ್ಥಿತಿಯಲ್ಲಿದ್ದರೂ ವಿಕ್ರಂಗೆ ಡ್ಯಾಮೇಜ್ಗಳಾಗಿಲ್ಲ. ಸುಸ್ಥಿತಿಯಲ್ಲಿರುವ ಹಿನ್ನೆಲೆಯಲ್ಲಿ ಇಸ್ರೋ ತಂತ್ರಜ್ಞರು ವಿಕ್ರಂ ಜತೆ ಸಂಪರ್ಕ ಸಾಧಿಸಲು ನಿರಂತರ ಪ್ರಯತ್ನದಲ್ಲಿದ್ದಾರೆ.
ಭಾನುವಾರ ಆರ್ಬಿಟರ್, ವಿಕ್ರಂ ಲ್ಯಾಂಡರ್ ಚಿತ್ರಗಳನ್ನು ಸೆರೆಹಿಡಿದು ಇಸ್ರೋಗೆ ಮಾಹಿತಿ ರವಾನಿಸಿತ್ತು. ಇಲ್ಲಿಂದ ಇಸ್ರೋ ತಂತ್ರಜ್ಞರಲ್ಲಿಯೂ ವಿಕ್ರಂ ಜತೆ ಮತ್ತೆ ಸಂಪರ್ಕ ಸಾಧಿಸುವ ಕೌತುಕತೆ ಮನೆ ಮಾಡಿತ್ತು. ಇದೀಗ ವಿಕ್ರಂ ಜತೆ ಸಂಪರ್ಕ ಸಾಧಿಸುವ ಸಾಧ್ಯತೆಗೆ ಮತ್ತೊಂದು ಹೆಜ್ಜೆ ಮುಂದೆ ಇಟ್ಟಂತಾಗಿದೆ ಎಂದರೆ ತಪ್ಪಾಗಲಾರದು.
ಈ ಬಗ್ಗೆ ಸೋಮವಾರವೇ ನ್ಯೂಸ್18ಗೆ ಇಸ್ರೋ ಮೂಲಗಳು ಮಾಹಿತಿ ನೀಡಿತ್ತು. ಇದೀಗ ಇಸ್ರೋ ಅಧಿಕೃತ ಟ್ವಿಟ್ಟರ್ ಖಾತೆಯಲ್ಲೂ ವಿಕ್ರಂ ಜತೆ ಸಂಪರ್ಕ ಸಾಧಿಸಲು ಸತತವಾಗಿ ಯತ್ನಿಸುತ್ತಿರುವುದಾಗಿ ತಿಳಿಸಿದೆ.
“ಚಂದ್ರಯಾನ್ – 2 ಆರ್ಬಿಟರ್ ವಿಕ್ರಂ ಲ್ಯಾಂಡರ್ನ್ನು ಚಂದ್ರನ ಅಂಗಳದಲ್ಲಿ ಪತ್ತೆ ಹಚ್ಚಿದೆ. ಆದರೆ ಇದುವರೆಗೂ ಸಂಪರ್ಕ ಸಾಧಿಸಲು ಆಗಿಲ್ಲ. ಆದರೆ ಇಸ್ರೋ ಸಂಪರ್ಕ ಸಾಧಿಸಲು ಸಕಲ ಯತ್ನಗಳನ್ನೂ ಮಾಡುತ್ತಿದೆ,” ಎಂದು ಇಸ್ರೋ ಟ್ವೀಟ್ ಮಾಡಿದೆ.