ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ, 20 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ನಿನ್ನೆಯೇ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ಪ್ರಮುಖ ಆರೋಪಿ ಮನ್ಸೂರ್ ಖಾನ್ ಸೇರಿದಂತೆ ಘಟಾನುಘಟಿಗಳ ಹೆಸರು ಉಲ್ಲೇಖ ಮಾಡಲಾಗಿದೆ. ಐಎಂಎ ಎಂಡಿ ಮನ್ಸೂರ್, ಏಳು ನಿರ್ದೇಶಕರು, 5 ಸದಸ್ಯರು, 5 ಆಡಿಟರ್ ಮತ್ತು ಕಂಪನಿಯ ಚಾನಲ್ ಪಾಟ್ನರ್ ಹೆಸರು ಕೂಡ ದೋಷಾರೋಪಣೆ ಪಟ್ಟಿಯಲ್ಲಿ ಸೇರಿಸಲಾಗಿದೆ.
ಇನ್ನು ದೋಷಾರೋಪಣೆ ಪಟ್ಟಿಯಲ್ಲಿ ಐಎಂಎ ಹೇಲ್ತ್ ಕೇರ್ , ಐಎಂಎ ಜ್ಯೂವಲೆರಿ , ಐಎಂಎ ಟ್ರೇಡಿಂಗ್ ಮತ್ತು ಐಎಂಎ ಕೋ ಅಪರೆಟಿವ್ ಸೊಸೈಟಿ ಹೆಸರು ಉಲ್ಲೇಖ ಮಾಡಲಾಗಿದೆ. ಅಲ್ಲದೇ ಇವುಗಳ ವಿರುದ್ಧವೂ 120b, 406, 409, 420, 477A ಐಪಿಸಿ ಸೆಕ್ಷನ್ಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಬಗ್ಗೆ 12 ಜನರ ತಜ್ಞರನ್ನೊಳಗೊಂಡ ತಂಡದಿಂದ ತನಿಖೆಯೂ ನಡೆಸಲಾಗುತ್ತಿದೆ. ಚಾರ್ಟೆಡ್ ಅಕೌಂಟೆಂಟ್, ಫೊರೆನ್ಸಿಕ್ ಆಡಿಟರ್, ಕಂಪ್ಯೂಟರ್ ಫೊರೆನ್ಸಿಕ್ ತಜ್ಞರು ಮತ್ತು ಬ್ಯಾಂಕರ್ಸ್ ಒಳಗೊಂಡ ತಂಡದಿಂದ ತನಿಖೆ ಮುಂದುವರೆದಿದೆ.
ಈ ಹಿಂದೆಯೇ ಸಿಬಿಐ ಐಎಂಎ ಬಹುಕೋಟಿ ವಂಚನೆ ಪ್ರಕರಣ ಕುರಿತಂತೆ ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಎಫ್‌ಐಆರ್‌ನಲ್ಲಿ 25 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿತ್ತ. ಐಎಂಎ ವಂಚನೆ ಪ್ರಕರಣವನ್ನು ರಾಜ್ಯ ಸರಕಾರ ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡಿದ್ದ ಅಧಿಕಾರಿಗಳು, ಹಿಂದೆಯೇ ಪ್ರಕರಣದ ತನಿಖೆ ನೇತೃತ್ವವಹಿಸಿದ್ದ ಎಸ್‌ಐಟಿ ಮುಖ್ಯಸ್ಥ ಬಿ.ಆರ್. ರವಿಕಾಂತೇಗೌಡರನ್ನು ಭೇಟಿಯಾಗಿ ಮಾಹಿತಿ ಪಡೆದುಕೊಂಡಿದ್ದರು.
ಎಸ್‌ಐಟಿ ಅಧಿಕಾರಿ ಭೇಟಿ ಬಳಿಕ ಪ್ರಕರಣ ಸಂಬಂಧ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡಿತ್ತು. ಅಲ್ಲದೇ ಸಿಬಿಐ ಎಫ್‌ಐಆರ್‌ನಲ್ಲಿ ಕಂಪನಿಯ ಮಾಲಿಕ ಮನ್ಸೂರ್ ಖಾನ್, ನಿರ್ದೇಶಕರು ಹಾಗೂ ಇತರರನ್ನು ಆರೋಪಿಗಳನ್ನಾಗಿ ಹೆಸರಿಸಿತ್ತು. ಮನ್ಸೂರ್ ಖಾನ್‌ರನ್ನು ಜುಲೈ 21ರಂದು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಪ್ರಕರಣದ ತನಿಖೆಗಾಗಿ ಸಿಬಿಐ ಹೈದರಾಬಾದ್ ಹಾಗೂ ಬೆಂಗಳೂರು ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿದೆ.
ಏನಿದು ಪ್ರಕರಣ?: ಶಿವಾಜಿನಗರ ಪ್ರತಿಷ್ಠಿತ ಐಎಂಎ ಜ್ಯುವೆಲರಿ ಅಂಗಡಿ ಮಾಲೀಕ ಮಹಮ್ಮದ್ ಮನ್ಸೂರ್ ಖಾನ್ ಮಾಡಿದ್ದ ವಿಡಿಯೋವೊಂದು ಭಾರೀ ಕೋಲಾಹಲ ಸೃಷ್ಟಿಸಿತ್ತು. ತನಗೆ ಕಾಂಗ್ರೆಸ್ ಶಾಸಕ ರೋಷನ್ ಬೇಗ್ ಹಣ ಪಡೆದು ಹಿಂದಿರುಗಿಸದೆ ವಂಚಿಸುತ್ತಿದ್ದಾರೆ. ಹೀಗಾಗಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವಿಡಿಯೋ ಮಾಡಿರುವ ಮನ್ಸೂರ್ ಖಾನ್ ನಗರ ಪೊಲೀಸ್ ಕಮಿಷನರ್ಗೆ ಕಳುಹಿಸಿಕೊಟ್ಟಿದ್ದರು.
ವಿಡಿಯೋ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆ ಮನ್ಸೂರ್ ಖಾನ್ಗೆ ಹಣ ನೀಡಿದ್ದ ನೂರಾರು ಜನ ಹೂಡಿಕೆದಾರರು ಶಿವಾಜಿನಗರದ ಐಎಂಎ ಜ್ಯುವೆಲರಿ ಅಂಗಡಿ ಬಳಿ ಜಮಾಯಿಸಿದ್ದರು. ನಂತರ ಅಂಗಡಿಗೆ ಮುತ್ತಿಗೆ ಹಾಕಲು ಜನರು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ಮಾಡಿ, ಜನರನ್ನು ಚದುರಿಸಿದ್ದರು.
ಶಾಸಕ ರೋಷನ್ ಬೇಗ್ ನನ್ನಿಂದ 400 ಕೋಟಿ ಹಣ ಪಡೆದುಕೊಂಡಿದ್ದಾರೆ. ಕೇಳಿದರೆ ರೌಡಿಗಳನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಾರೆ. ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ಯಾವುದೇ ಹಳ್ಳಿಯೊಂದರಲ್ಲಿ ನಾನು, ನನ್ನ ಕುಟುಂಬದ ಜೊತೆಗೆ ತಲೆ ಮರೆಸಿಕೊಂಡಿದ್ದೇನೆ. ನೀವು ಈ ವಿಡಿಯೋ ಕೇಳುವುದರೊಳಗೆ ನಾನು ಈ ಲೋಕದಲ್ಲಿ ಇರುವುದಿಲ್ಲ ಎಂದು ಮನ್ಸೂರ್ ಖಾನ್ ವಿಡಿಯೋದಲ್ಲಿ ಹೇಳಿದ್ದರು. ಆದರೆ, ನನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು.