ನುಚ್ಚು ನೂರಾಯ್ತು ಸೆರೆನಾ ಕನಸು; 19ರ ಚೆಲುವೆಗೆ ಗ್ರ್ಯಾನ್ ಸ್ಲಾಮ್ ಚಾಂಪಿಯನ್ ಪಟ್ಟ!

ನ್ಯೂಯಾರ್ಕ್​​: ಸೆರೆನಾ ವಿಲಿಯಮ್ಸ್ ಕನಸು ನುಚ್ಚುನೂರಾಗಿದೆ! ಯುಎಸ್ ಓಪನ್ 2019ರಲ್ಲಿ 24ನೇ ಗ್ರಾನ್ ಸ್ಲ್ಯಾಮ್ ಪ್ರಶಸ್ತಿಗೆ ಮುತ್ತಿಡಬೇಕೆಂದುಕೊಂಡಿದ್ದ ಸೆರೆನಾ ವಿಲಿಯಮ್ಸ್ ಆಸೆ ಕೈಗೂಡಿಲ್ಲ.

19 ರ ಹರೆಯದ ಬಿಯಾಂಕ ಆಂಡ್ರೆಸ್ಕಾ ಅವರು ಸೆರೆನಾ ವಿಲಿಯಮ್ಸ್​​ರನ್ನು ಫೈನಲ್​ ಕಾದಾಟದಲ್ಲಿ ಸೋಲಿಸಿ ಇತಿಹಾಸದ ಪುಟ ಸೇರಿದ್ದಾರೆ. ಕೆನಡಾದ ಬಿಯಾಂಕ ಆಂಡ್ರೆಸ್ಕಾ ವಿಲಿಯಮ್ಸ್​​​​​​ ವಿರುದ್ಧ 6-3, 7-5 ಅಂಕಗಳ ಅಂತರದಿಂದ ಗೆಲುವು ದಾಖಲು ಮಾಡಿ ಚೊಚ್ಚಲ ಯುಎಸ್​ ಓಪನ್​ ಕಿರೀಟ ಮುಡಿಗೇರಿಸಿಕೊಂಡರು.

ಈ ಮೂಲಕ 2006ರಲ್ಲಿ ಮರಿಯಾ ಶೆರಪೋವಾ ಬಳಿಕ ಯುಎಸ್ ಓಪನ್ ಗೆದ್ದ ಅತ್ಯಂತ ಯುವ ಆಟಗಾರ್ತಿ ಎಂಬ ಸಾಧನೆಯನ್ನು ಬಿಯಾಂಕಾ ಮಾಡಿದ್ದಾರೆ. ಅಲ್ಲದೆ ಬಿಯಾಂಕ ಯುಎಸ್ ಓಪನ್ ಜಯಿಸಿದ ಮೊತ್ತಮೊದಲ ಕೆನಡಾ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾದರು.

ಇತ್ತ 2018ರಲ್ಲಿ ಜಪಾನಿನ ನಯೋಮಿ ಒಸಾಕಾ ವಿರುದ್ಧ ಸೋಲು ಕಂಡ ಬಳಿಕ 37 ವರ್ಷ ಪ್ರಾಯದ ಸೆರೆನಾಗೆ ಇದು ಸತತ ಎರಡನೇ ಸೋಲಾಗಿದೆ.

ಸೆಮಿಫೈನಲ್​ ಹಣಾಹಣಿಯಲ್ಲಿ ಬೆಲಿಂಡಾ ವಿರುದ್ಧ 7-6,7-5 ಸೆಟ್​ಗಳಿಂದ ಜಯಿಸಿದ್ದ 15ನೇ ಶ್ರೇಯಾಂಕದ ಬಿಯಾಂಕಾ, 3.85 ಮಿಲಿಯನ್ ಡಾಲರ್ ಗೆದ್ದು ಬೀಗಿದ್ದಾರೆ. ಸೆರೆನಾ 1.9 ಮಿಲಿಯನ್ ಡಾಲರ್​ಗೆ ತೃಪ್ತಿ ಪಡಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ