ನ್ಯಾಯಾಂಗ ಕ್ಷೇತ್ರದಲ್ಲಿ ಪ್ರಖ್ಯಾತಿಗಳಿದ್ದ ರಾಮ್ ಜೇಠ್ಮಲಾನಿ

ಬೆಂಗಳೂರು: ರಾಮ್​ ಜೇಠ್ಮಲಾನಿ 1923ರ ಸೆಪ್ಟೆಂಬರ್​ 14ರಂದು ಜನಿಸಿದರು. ಖ್ಯಾತ ವಕೀಲರಾಗಿದ್ದ ಅವರು ಸುಪ್ರೀಂಕೋರ್ಟ್​, ಹೈಕೋರ್ಟ್​, ಅಧೀನ ನ್ಯಾಯಾಲಯಗಳಲ್ಲಿ ಹಲವು ಪ್ರಮುಖ ಪ್ರಕರಣಗಳಗಳಲ್ಲಿ ಹೋರಾಡಿದವರು. ತಮ್ಮ ತೀಕ್ಷ್ಣ ವಾದ ಮಂಡನೆಯಿಂದಲೇ ನ್ಯಾಯಾಂಗ ಕ್ಷೇತ್ರದಲ್ಲಿ ಪ್ರಖ್ಯಾತಿ ಗಳಿಸಿದ್ದರು.

18ನೇ ವರ್ಷದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದ ರಾಮ್​ ಜೇಠ್ಮಲಾನಿ ತಮ್ಮ 13 ವರ್ಷ ವಯಸ್ಸಿನಲ್ಲಿಯೇ ಮೆಟ್ರಿಕ್ಯುಲೇಷನ್​ ಪೂರ್ಣಗೊಳಿಸಿದ್ದರು. 17ನೇ ವರ್ಷದಲ್ಲಿ ಎಲ್​ಎಲ್​ಬಿ ಪದವಿ ಪಡೆದುಕೊಂಡಿದ್ದರು. ವಾಸ್ತವದಲ್ಲಿ 21ನೇ ವರ್ಷ ಆಗುವವರೆಗೂ ವಕೀಲಿ ವೃತ್ತಿ ಪ್ರಾರಂಭಿಸುವಂತಿಲ್ಲ. ಆದರೆ ನನ್ನ ವಿಚಾರದಲ್ಲಿ ವಿಶೇಷ ನಿರ್ಣಯ ಕೈಗೊಳ್ಳಲಾಯಿತು. 18ನೇ ವರ್ಷಕ್ಕೆ ವಕೀಲಿ ವೃತ್ತಿಯಲ್ಲಿ ತೊಡಗಲು ನನಗೆ ಅವಕಾಶ ಸಿಕ್ಕಿತು ಎಂದು 2002ರಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಅವರೇ ಹೇಳಿಕೊಂಡಿದ್ದರು.

ಸ್ಟಾಕ್ ಬ್ರೂಕರ್ ಹರ್ಷದ್ ಮೆಹ್ತಾ ಅವರಿಂದ ಹಿಡಿದು ಮಾಜಿ ಪ್ರಧಾನಿ ಪಿ. ವಿ. ನರಸಿಂಹರಾವ್ ಅವರಂತಹ ಅನೇಕ ವಿವಾದಾತ್ಮಕ ಕೇಸ್ ಗಳ ಪರ ವಾದ ಮಂಡಿಸಿದ್ದರು. 1959ರಲ್ಲಿ  ಕೆ.ಎಂ. ನಾನಾವತಿ ವರ್ಸಸ್  ಮಹಾರಾಷ್ಟ್ರ ಸರ್ಕಾರ , 2011ರಲ್ಲಿ ಬಹು ಕೋಟಿ 2 ಜಿ ಹಗರಣ,  ಅಡ್ವಾಣಿ ಮೇಲಿನ ಹವಾಲಾ ಹಗರಣ, ಅರವಿಂದ್ ಕೇಜ್ರಿವಾಲ್ ಮೇಲೆ ಅರುಣ್ ಜೇಟ್ಲಿ ಹಾಕಿದ್ದ ಮಾನನಷ್ಟ ಮೊಕದ್ದಮೆ ಸೇರಿದಂತೆ ಹಲವು ಹೈ ಪ್ರೋಫೈಲ್ ಕೇಸ್ ಗಳಲ್ಲಿ ರಾಮ್ ಜೇಠ್ಮಲಾನಿ ತಮ್ಮ ಪ್ರಖರ ವಾದ ಮಂಡಿಸಿ ಜನಮನ್ನಣೆ ಗಳಿಸಿದ್ದರು.

ರಾಜಕೀಯ ಜೀವನ:
2010ರಲ್ಲಿ ಸುಪ್ರೀಂಕೋರ್ಟ್ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದರು. ಬಳಿಕ 6 ಮತ್ತು 7ನೇ ಲೋಕಸಭೆಯಲ್ಲಿ ಮುಂಬೈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಅಟಲ್​ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಕಾನೂನು ಹಾಗೂ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ನಂತರ 2004ರ ಲೋಕಸಭಾ ಚುನಾವಣೆಯಲ್ಲಿ ವಾಜಪೇಯಿ ವಿರುದ್ಧ ಲಖನೌನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು. ಬಳಿಕ 2010ರಲ್ಲಿ ಬಿಜೆಪಿಯಿಂದಲೇ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ