ಮೇಯರ್ ಆಯ್ಕೆ ಸಂದರ್ಭದಲ್ಲೇ ಸ್ಥಾಯಿಸಮಿತಿಗಳ ಆಯ್ಕೆಗೂ ಚುನಾವಣೆ

ಬೆಂಗಳೂರು, ಸೆ.6- ತಿಂಗಳಾಂತ್ಯದಲ್ಲಿ ನಡೆಯಲಿರುವ ಮೇಯರ್ ಆಯ್ಕೆ ಚುನಾವಣೆ ಸಂದರ್ಭದಲ್ಲೇ ಸ್ಥಾಯಿಸಮಿತಿಗಳ ಆಯ್ಕೆಗೂ ಚುನಾವಣೆ ನಡೆಸಬೇಕೆಂದು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರಿಗೆ ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಮನವಿ ಮಾಡಿದ್ದಾರೆ.

ಹಾಲಿ ಮೇಯರ್ ಗಂಗಾಂಬಿಕೆ ಅವರ ಅಧಿಕಾರಾವಧಿ ಈ ತಿಂಗಳು ಅಂತ್ಯಗೊಳ್ಳಲಿದೆ. ಮೇಯರ್ ಆಯ್ಕೆ ವೇಳೆ ಸ್ಥಾಯಿ ಸಮಿತಿಗೂ ಚುನಾವಣೆ ನಡೆಸಬೇಕೆಂದು ಮನವಿ ಮಾಡಲಾಗಿದ್ದು, ಮೇಯರ್ ಆಯ್ಕೆ ವೇಳೆ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆದಿರಲಿಲ್ಲ. ಡಿಸೆಂಬರ್‍ನಲ್ಲಿ ಚುನಾವಣೆ ನಡೆದಿತ್ತು. ಹಾಗಾಗಿ ಸ್ಥಾಯಿ ಸಮಿತಿಗಳ ಅಧಿಕಾರಾವಧಿ ಒಂದು ವರ್ಷ ಎಂದುಕೊಂಡಿದ್ದಾರೆ.

ಹಾಗಾಗಿ ಡಿಸೆಂಬರ್‍ನಲ್ಲೇ ಸ್ಥಾಯಿ ಸಮಿತಿಗಳಿಗೆ ಚುನಾವಣೆ ನಡೆಸಬೇಕೆಂದು ತೀರ್ಮಾನಿಸಲಾಗಿದೆ. ಆದರೆ 1998ರಲ್ಲಿ ಪದ್ಮನಾಭ ರೆಡ್ಡಿ ಅವರೇ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಪ್ರತಿಪಕ್ಷ ನ್ಯಾಯಾಲಯದ ಮೊರೆ ಹೋಗಿತ್ತು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಇಷ್ಟಬಂದಂತೆ ಚುನಾವಣೆ ನಡೆಸಬಾರದೆಂದು ಸೂಚನೆ ನೀಡಿತ್ತು. ಮೇಯರ್ ಆಯ್ಕೆ ವೇಳೆ ಸ್ಥಾಯಿ ಸಮಿತಿಗೂ ಚುನಾವಣೆ ನಡೆಸಬೇಕೆಂದಾಗ ಪದ್ಮನಾಭ ರೆಡ್ಡಿ ಅವರು 6 ತಿಂಗಳಲ್ಲೇ ಅಧಿಕಾರ ಕಳೆದುಕೊಂಡಿದ್ದರು.

2010ರಲ್ಲಿ ಎಸ್.ಕೆ.ನಟರಾಜ್ ಅವರು ಮೇಯರ್ ಆಗಿದ್ದಾಗಲೂ ಕೂಡ ಸ್ಥಾಯಿ ಸಮಿತಿಗೆ ತಡವಾಗಿ ಚುನಾವಣೆ ನಡೆದಿತ್ತು. ಈ ಸಂದರ್ಭದಲ್ಲಿ ಪದ್ಮನಾಭ ರೆಡ್ಡಿ ಅವರು ಕೂಡ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ಇವರ ಮನವಿಗೆ ನ್ಯಾಯಾಲಯ ಮನ್ನಣೆ ನೀಡಿತ್ತು. ಆಗಲೂ ಸಹ ಸ್ಥಾಯಿ ಸಮಿತಿ ಸದಸ್ಯರ ಅಧಿಕಾರ ಅವಧಿ ಒಂದು ವರ್ಷ ಪೂರೈಸಿರಲಿಲ್ಲ.

ಈಗ ಬಿಜೆಪಿಗೆ ಮೇಯರ್ ಆಗುವ ಸಾಧ್ಯತೆಯಿದ್ದು, ಪ್ರಸ್ತುತ ಸ್ಥಾಯಿ ಸಮಿತಿಯಲ್ಲಿ ಕಾಂಗ್ರೆಸ್-ಜೆಡಿಎಸ್‍ನವರಿದ್ದು, ಅವರ ಅಧಿಕಾರ ಅವಧಿ ಮೂರು ತಿಂಗಳು ಇರುತ್ತದೆ. ಇದು ಅಭಾಸವಾಗಲಿದೆ ಎಂಬ ಕಾರಣಕ್ಕೆ 1998ರ ಆದೇಶ ಪ್ರತಿಯನ್ನು ಪದ್ಮನಾಭ ರೆಡ್ಡಿ ಅವರು, ಹರ್ಷಗುಪ್ತ ಅವರಿಗೆ ನೀಡಿ ಮೇಯರ್ ಚುನಾವಣೆ ವೇಳೆಯೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ