ಬೆಂಗಳೂರು, ಸೆ.7-ಹಾಲಿ ಮೇಯರ್ ಗಂಗಾಂಬಿಕೆ ಅವರ ಅವಧಿ ಸೆಪ್ಟೆಂಬರ್ 28ಕ್ಕೆ ಅಂತ್ಯಗೊಳ್ಳಲಿದ್ದು, ಆ ದಿನಾಂಕದೊಳಗೆ ಹೊಸ ಮೇಯರ್ ಆಯ್ಕೆಗೆ ಚುನಾವಣೆ ನಡೆಯಬೇಕಿದೆ.
ಸೆ.28 ರಂದು ಮಹಾಲಯ ಅಮಾವಾಸ್ಯೆ ಇದ್ದು, ಸರ್ಕಾರಿ ರಜೆ ಇರುವುದರಿಂದ 27 ರಂದೇ ಮೇಯರ್ -ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತ.
ಹೊಸ ಮೇಯರ್ ಆಯ್ಕೆಗೆ ಮತದಾರರ ಪಟ್ಟಿ ಅಂತಿಮವಾಗಿದ್ದು, ಈಗಾಗಲೇ ಪ್ರಾದೇಶಿಕ ಆಯುಕ್ತರಿಗೆ ಅಧಿಕಾರಿಗಳು ಪಟ್ಟಿಯನ್ನು ರವಾನೆ ಮಾಡಿದ್ದಾರೆ.
ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರು ಈಗಾಗಲೇ ಮೇಯರ್ ಚುನಾವಣಾ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಮುಂದಿನ ವಾರ ವೇಳಾಪಟ್ಟಿ ಹೊರಬೀಳುವ ಸಾಧ್ಯತೆಗಳಿವೆ.
ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಅವರು, ನಿನ್ನೆ ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಿ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೂ ಮೇಯರ್ ಆಯ್ಕೆ ಸಂದರ್ಭದಲ್ಲೇ ಚುನಾವಣೆ ನಡೆಸುವಂತೆ ಮನವಿ ಸಲ್ಲಿಸಿರುವುದರಿಂದ ಸೆ.27ರಂದೇ ಸ್ಥಾಯಿ ಸಮಿತಿಗೂ ಚುನಾವಣೆ ನಡೆಯುವ ಸಾಧ್ಯತೆ ಇದೆ.