ಬೆಂಗಳೂರು, ಸೆ.7- ಇಡೀ ವಿಶ್ವದ ಕುತೂಹಲ ಕೆರಳಿಸಿದ್ದ ಮಹತ್ವಾಕಾಂಕ್ಷಿ ಚಂದ್ರಯಾನ-2 ಯೋಜನೆಯ ವಿಕ್ರಮ್ ಲ್ಯಾಂಡರ್ ಕೊನೆ ಕ್ಷಣದಲ್ಲಿ ನಿಯಂತ್ರಣ ಕೊಠಡಿಯ ಸಂಪರ್ಕ ಕಡಿತಗೊಂಡ ಬಳಿಕ ಹತಾಶರಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಧೈರ್ಯ ತುಂಬಿದ್ದಾರೆ.
ನಿಮ್ಮ ಸಾಧನೆ ಯಾವುದಕ್ಕೂ ಕಡಿಮೆಯಿಲ್ಲ, ನೀವು ಅತ್ಯುತ್ತಮ ಸೇವೆ ಸಲ್ಲಿಸಿದ್ದೀರಿ, ವಿಜ್ಞಾನ ಕ್ಷೇತ್ರದಲ್ಲಿ ಏಳು-ಬೀಳು ಸಹಜ ಈ ಅತ್ಯಲ್ಪ ಹಿನ್ನೆಡೆಯಿಂದ ನಿರಾಶರಾಗಬೇಡಿ. ನಿಮ್ಮ ಬೆಂಬಲಕ್ಕೆ ಇಡೀ ದೇಶವಿದ್ದು, ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ನಾವು ಖಂಡಿತ ಈ ಅಭಿಯಾನದಲ್ಲಿ ಯಶಸ್ಸು ಸಾಧಿಸುತ್ತೇವೆ ಎಂದು ಮೋದಿ ನೈತಿಕ ಸ್ಥೈರ್ಯದ ಮಾತುಗಳನ್ನಾಡಿದರು.
ವಿಕ್ರಂ ಲ್ಯಾಂಡರ್ ಸಂಪರ್ಕ ಕಳೆದುಕೊಂಡ ನಂತರ ನಿರಾಶರಾಗಿ ಆತಂಕಗೊಂಡ ವಿಜ್ನ್ಯಾನಿಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ ನಿಮ್ಮ ಈ ಶ್ರಮ ದೇಶಕ್ಕೆ ಸಾಕಷ್ಟು ಪಾಠ ಕಲಿಸಿದೆ. ನನ್ನ ಕಡೆಯಿಂದ ನಿಮಗೆ ಶುಭ ಕೋರುತ್ತೇನೆ. ನೀವು ನಿಮ್ಮ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದ್ದೀರಿ. ನಾನು ನಿಮ್ಮ ಬೆಂಬಲಕ್ಕೆ ನಿಂತಿದ್ದೇನೆ. ನಿಮ್ಮ ಬೆಂಬಲಕ್ಕೆ ಇಡೀ ದೇಶವಿದ್ದು, ನಿಮ್ಮ ಬಗ್ಗೆ ಹೆಮ್ಮೆ ಪಡುತ್ತದೆ. ನಾವು ಧೈರ್ಯದಿಂದ ಮುನ್ನಡೆಯೋಣ. ನಾಳೆ ಯಶಸ್ಸು ನಮ್ಮದಾಗುತ್ತದೆ ಚಿಂತೆ ಬೇಡ ಎಂದು ತಿಳಿಸಿ ವಿಜ್ನ್ಯಾನಿಗಳ ಪ್ರಯತ್ನವನ್ನು ಶ್ಲಾಘಿಸಿ ಅವರಿಗೆ ಧೈರ್ಯ ತುಂಬಿದರು.
ಪೀಣ್ಯದ ಇಸ್ರೊ ಕೇಂದ್ರದಲ್ಲಿ ಶನಿವಾರ ನಸುಕಿನಲ್ಲಿ ಚಂದ್ರಯಾನ-2 ವ್ರೋ ನೌಕೆಯ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಯಂತೆ ಇಳಿದರೂ, ಚಂದಿರನ ಮೇಲ್ಮೈಗೆ 2.1ಕಿ.ಮೀ ಸನಿಹವಿದ್ದಾಗ ಇಸ್ರೋ ಕಂಟ್ರೋಲ್ ರೂಮ್ನಿಂದ ಹಠಾತ್ ಸಂಪರ್ಕ ಕಳೆದುಕೊಂಡಿತು. ಅದರಿಂದ ಸಂದೇಶ ಬಾರದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಕೆ.ಶಿವನ್ ಸೇರಿದಂತೆ ವಿಜ್ಞಾನಿಗಳ ಸಮೂಹ ಚಿಂತಾಕ್ರಾಂತವಾಯಿತು. ವಿಜ್ಞಾನಿಗಳು ಹತಾಶರಾಗಿದ್ದನ್ನು ಗಮನಿಸಿದ ಪ್ರಧಾನಿ ಮೋದಿ ಈ ಸಾಂತ್ವನದ ಮಾತುಗಳನ್ನು ಹೇಳಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಏಳು-ಬೀಳುಗಳು ಸಹಜ. ಆದರೆ ಈ ರಂಗದಲ್ಲಿ ವಿಫಲತೆ ಇರುವುದಿಲ್ಲ. ಸೋಲೆ ಗೆಲುವಿನ ಮೆಟ್ಟಿಲು. ಪ್ರಯತ್ನದಿಂದ ಯಶಸ್ಸಿನ ಫಲ ಶತಸಿದ್ಧ ಎಂದು ಮೋದಿ ವಿಜ್ಞಾನಿಗಳ ಸಮುದಾಯಕ್ಕೆ ಅಭಯ ನೀಡಿದರು.
ಬಳಿಕ ತೀವ್ರ ನಿರಾಶರಾಗಿ ಗಳಗಳನೆ ಅತ್ತ ಇಸ್ರೊ ಆಧ್ಯಕ್ಷರನ್ನು ತಬ್ಬಿಕೊಂಡು ಅವರು ಬೆನ್ನು ಸವರಿ ಮೋದಿ ಸಮಾಧಾನಪಡಿಸಿದರು. ಈ ಭಾವನಾತ್ಮಕ ದೃಶ್ಯ ಎಲ್ಲ ವಾರ್ತಾವಾಹಿನಿಗಳು ಮತ್ತು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರವಾಗಿ ಭಾರತೀಯರು ಎಲ್ಲರೂ ಕೂಡ ಭಾವೋದ್ವೇಗಕ್ಕೆ ಒಳಗಾದರು.
ಏಳು-ಬೀಳು ಸಹಜ:
ಏಳು-ಬೀಳು ಇದ್ದದ್ದೇ, ಇದೇನು ಕಡಿಮೆ ಸಾಧನೆಯಲ್ಲ ಎಂದು ಪ್ರಧಾನಿ ಮೋದಿ ವಿಜ್ನ್ಯಾನಿಗಳ ಬೆಂಬಲ ನೀಡಿದ್ದಾರೆ.
ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ, ಹತಾಶರಾಗಬೇಡಿ. ನಿಮ್ಮೊಂದಿಗೆ ನಾವಿದ್ದೇವೆ, ಇಡೀ ಭಾರತವಿದೆ ಎಂದು ಇಸ್ರೋ ವಿಜ್ನ್ಯಾನಿಗಳಿಗೆ ಮೋದಿಯವರು ಆತ್ಮಸ್ಥೈರ್ಯ ತುಂಬಿದ್ದಾರೆ.
ನಗರದಲ್ಲಿರುವ ಇಸ್ರೋ ಕಂಟ್ರೋಲ್ ಸೆಂಟರ್ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿಯವರು ಇಸ್ರೋ ವಿಜ್ನ್ಯಾನಿಗಳ ಕಾರ್ಯಕ್ಷಮತೆಯನ್ನು ಹಾಗೂ ಪರಿಶ್ರಮವನ್ನು ಕೊಂಡಾಡಿದ್ದಾರೆ.
ನಿಮ್ಮ ಪ್ರಯತ್ನವನ್ನು ಇಡೀ ಭಾರತವೇ ಕೊಂಡಾಡುತ್ತಿದೆ. ಅಡೆತಡೆಗಳಿಂದ ನಮ್ಮ ಉತ್ಸಾಹವೇನೂ ಕಡಿಮೆಯಾಗಲಿಲ್ಲ. ಬದಲಾಗಿ ಹೆಚ್ಚಾಗಿದೆ. ದೇಶದ ಪ್ರಗತಿಗೆ ಅತ್ಯಂತ ದೊಡ್ಡ ಕೊಡುಗೆಯನ್ನು ನೀಡಿದ್ದೀರ ಎಂದು ಹೇಳಿದ್ದಾರೆ.
ವಿಕ್ರಮ್ ಲ್ಯಾಂಡ ಸಂಪರ್ಕ ಕಳೆದುಕೊಂಡಾಗ ನೀವು ಆಂತಕಗೊಂಡಿದ್ದೀರಿ. ಕಳೆದ ರಾತ್ರಿ ನಿಮ್ಮ ಮನಸ್ಥಿತಿ ನನಗೆ ಅರ್ಥವಾಗಿದೆ. ನಿಮ್ಮ ಕಣ್ಣುಗಳು ಹಾಗೂ ಮುಖದ ಭಾವನೆಗಳೇ ಎಲ್ಲವನ್ನೂ ಹೇಳುತ್ತಿತ್ತು. ಹೀಗಾಗಿಯೇ ಆ ಸಮಯದಲ್ಲಿ ನಿಮ್ಮೊಂದಿಗೆ ಹೆಚ್ಚು ಕಾಲ ಇರಲಿಲ್ಲ. ಭಾರತ ಮಾತೆ ಸದಾ ತಲೆ ಎತ್ತಿ ನಿಲ್ಲುವಂತೆ ಮಾಡುವ ಸಲುವಾಗಿ ನಿಮ್ಮ ಇಡೀ ಜೀವನವನ್ನು ಕಳೆಯುತ್ತೀರಿ. ನೀವು ಹಲವು ರಾತ್ರಿಗಳನ್ನು ನಿದ್ರೆಯಿಲ್ಲದಂತೆ ಕಳೆದಿದ್ದೀರಿ, ಕೆಲವು ಅಡೆತಡೆಗಳು ಎದುರಾಗಿದ್ದರೂ, ಅದು ನಮ್ಮ ಉತ್ಸಾಹವನ್ನು ಕಡಿಮೆ ಮಾಡಿಲ್ಲ. ಬದಲಾಗಿ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ ಎಂದು ಶ್ಲಾಘಿಸಿದರು.
ನಮ್ಮ ವಿಜ್ನ್ಯಾನಿಗಳು ಹಾಗೂ ಬಾಹ್ಯಾಕಾಶಯಾನದ ಬಗ್ಗೆ ಬಹಳ ಹೆಮ್ಮೆಯಿದೆ. ನಿಮ್ಮ ಸಮರ್ಪಣೆಯಿಂದಾಗಿ ಅದು ಮುಂದುವರಿಯುತ್ತಿದೆ. ನಮ್ಮ ಸಂಕಲ್ಪವೂ ಬಲಗೊಂಡಿದೆ. ನಿಮ್ಮ ಈ ಕಾರ್ಯಕ್ಷಮತೆ ಚಂದ್ರನನ್ನು ಮುಟ್ಟುವ ಆಸೆ ಮತ್ತಷ್ಟು ಗಟ್ಟಿ ಮಾಡಿದೆ. ನಿಮ್ಮ ಕಠಿಣ ಪರಿಶ್ರಮ ಪ್ರತಿಯೊಬ್ಬ ಭಾರತೀಯನಿಗೂ ತಿಳಿದಿದೆ. ಇಡೀ ಭಾರತವೇ ನಿಮ್ಮೊಂದಿಗೆ. ನಮ್ಮ ಕಲಿಕೆ ನಾಳೆ ನಮ್ಮನ್ನು ಗಟ್ಟಿಗೊಳಿಸುತ್ತದೆ.
ಮುಂಬರುವ ಮಹತ್ವದ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ. ನಿಮ್ಮ ಮೇಲೆ ಹೆಮ್ಮೆಯಿದೆ. ನಿಮ್ಮ ನಿರ್ಣಯಗಳು ನನಗಿಂತ ಹೆಚ್ಚು ಆಳವಾಗಿವೆ. ನಿಮ್ಮಲ್ಲಿ ನೀವು ಸ್ಫೂರ್ತಿಯ ಸಮುದ್ರ. ನಾವು ಅಲ್ಲಿಗೆ ಹೋಗಿ ಹುಡುಕಬೇಕಾದ ಸಾಕಷ್ಟು ಹೊಸ ಸ್ಥಳಗಳಿವೆ. ಭಾರತ ಸದಾಕಾಲ ನಿಮ್ಮೊಂದಿಗಿದೆ. ಶ್ರೇಷ್ಠ ಶಿಕ್ಷಕರು ಇದ್ದರೆ ಅದು ವಿಜ್ನ್ಯಾನ. ಇದರಲ್ಲಿ ಯಾವುದೇ ವೈಫಲ್ಯವಿಲ್ಲ. ಇದು ಕೇಲವು ಉಪಯೋಗಗಳನ್ನು ಹೊಂದಿದೆ ಎಂದು ಪ್ರಧಾನಿ ವಿಶ್ಲೇಷಿಸಿದರು.
ಬಳಿಕ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದ ಮೋದಿ, ಅವರೊಂದಿಗೆ ಪೋಟೋಗೆ ಪೋಸ್ ನೀಡಿದರು. ಅಂತೆಯೇ ಇದೇ ವಿಚಾರವಾಗಿ ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, ನಮ್ಮ ವಿಜ್ನ್ಯಾನಿಗಳ ಬಗ್ಗೆ ನಮಗೆ ಅತೀವ ಹೆಮ್ಮೆ ಇದೆ. ಅವರು ಅತ್ಯುತ್ತಮವಾದದ್ದನ್ನು ನೀಡಿದ್ದಾರೆ ಮತ್ತು ಯಾವಾಗಲೂ ಭಾರತವನ್ನು ಹೆಮ್ಮೆ ಪಡುವಂತೆ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.