ಬೆಂಗಳೂರು,ಸೆ.7- ಸಾಕಷ್ಟು ಸರ್ಕಸ್ ನಡೆಸಿ ಸಚಿವ ಸಂಪುಟ ವಿಸ್ತರಣೆ ಮಾಡಿದ ಬಳಿಕ ಇದೀಗ ಜಿಲ್ಲಾ ಉಸ್ತುವಾರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮತ್ತೊಂದು ತಲೆನೋವು ಎದುರಾಗಿದೆ.
ಸಂಪುಟ ವಿಸ್ತರಣೆಯಾಗಿ 12 ದಿನ ಕಳೆದರೂ ಈವರೆಗೂ ಸಚಿವರಿಗೆ ಜಿಲ್ಲಾ ಉಸ್ತುವಾರಿಗಳನ್ನಾಗಿ ನೇಮಕ ಮಾಡಲು ಸಿಎಂ ಬಿಎಸ್ವೈಗೆ ಸಾಧ್ಯವಾಗುತ್ತಿಲ್ಲ. ಕಾರಣ ಸಚಿವರು ತಮಗೆ ಇಂಥದೇ ಜಿಲ್ಲೆ ಬೇಕೆಂದು ಪಟ್ಟು ಹಿಡಿದಿರುವುದೇ ವಿಳಂಬಕ್ಕೆ ಕಾರಣವಾಗುತ್ತಿದೆ.
ಅದರಲ್ಲೂ ರಾಜಧಾನಿ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಬಿಜೆಪಿಯಲ್ಲಿ ಸಾಕಷ್ಟು ಕಸರತ್ತು ನಡೆಯುತ್ತಿದೆ. ಪ್ರಾರಂಭದ ದಿನಗಳಿಂದಲೂ ಬೆಂಗಳೂರು, ಬಿಬಿಎಂಪಿ ಸದಸ್ಯರು ಹಾಗೂ ಪಾಲಿಕೆ ಮೇಲೆ ಸಾಕಷ್ಟು ಪ್ರಭಾವ ಹೊಂದಿರುವ ಆರ್.ಅಶೋಕ್ ತಮಗೆ ಇದರ ಜವಾಬ್ದಾರಿಯನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಪ್ರಾರಂಭದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಜೊತೆಗೆ ಬೆಂಗಳೂರು ನಗರಾಭಿವೃದ್ದಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅಶೋಕ್ಗೆ ಈ ಬಾರಿ ನಿರೀಕ್ಷಿಸದ್ದೇ ಒಂದಾದರೆ ಸಿಕ್ಕಿದ್ದು ಮತ್ತೊಂದು.
ಕೊನೆ ಕ್ಷಣದವರೆಗೂ ಡಿಸಿಎಂ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಲು ಭಾರೀ ಲಾಬಿ ನಡೆಸಿದರೂ ಈ ಬಾರಿ ಅವರ ಗಾಡ್ಫಾದರ್ಗಳು ಬೆಂಬಲಕ್ಕೆ ಬರಲಿಲ್ಲ. ಜೊತೆಗೆ ಸಂಘ ಪರಿವಾರದ ನಾಯಕರ ಸಹಕಾರವೂ ಸಿಗದಿರುವುದೇ ಅಶೋಕ್ಗೆ ಹಿನ್ನಡೆ ಎನ್ನಲಾಗುತ್ತಿದೆ.
ಅಚ್ಚರಿ ಎಂಬಂತೆ ಮೊದಲ ಬಾರಿಗೆ ಸಂಪುಟಕ್ಕೆ ಸೇರ್ಪಡೆಯಾಗಿ ಅತ್ಯಂತ ಪ್ರಬಲ ಎನಿಸಿದ ಉನ್ನತ ಶಿಕ್ಷಣ ಖಾತೆಯನ್ನು ಪಡೆಯುವುದರ ಜೊತೆಗೆ ಡಿಸಿಎಂ ಸ್ಥಾನ ಪಡೆಯುವುದರಲ್ಲಿ ಯಶಸ್ವಿಯಾದ ಮಲ್ಲೇಶ್ವರಂನ ಡಾ.ಸಿ.ಎನ್.ಅಶ್ವಥ್ನಾರಾಯಣ ಬೆಂಗಳೂರಿನ ಮೇಲೆ ಹಿಡಿತ ಸಾಧಿಸಲು ಮುಂದಾಗಿದ್ದಾರೆ.
ಸ್ವತಃ ಯಡಿಯೂರಪ್ಪ, ಕೇಂದ್ರ ಬಿಜೆಪಿ ವರಿಷ್ಠರು ಹಾಗೂ ಸಂಘ ಪರಿವಾರದ ಬೆಂಬಲವೂ ಅಶ್ವಥ್ ನಾರಾಯಣ್ ಅವರಿಗೆ ಸಿಕ್ಕಿರುವ ಕಾರಣ ಬೆಂಗಳೂರು ಸೇರಿದಂತೆ ಮೈಸೂರು ಭಾಗದಲ್ಲಿ ಅವರನ್ನು ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕನನ್ನಾಗಿ ಬೆಳೆಸುವ ಲೆಕ್ಕಾಚಾರ ವರಿಷ್ಠರಲ್ಲಿದೆ.
ಹೀಗಾಗಿ ಬೆಂಗಳೂರು ಯಾರ ತೆಕ್ಕೆಗೆ ಸಿಗಲಿದೆ ಎಂಬುದು ಕೊನೆ ಕ್ಷಣದವರೆಗೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ.
ಬೆಂಗಳೂರು ನಂತರ ಅತಿ ಎರಡನೇ ದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲೂ ಹಿಡಿತ ಸಾಧಿಸಲು ತೆರೆಮರೆಯ ಪ್ರಯತ್ನ ಆರಂಭವಾಗಿದೆ.
ಹಲವರ ವಿರೋಧದ ನಡುವೆಯೂ ಸಂಪುಟಕ್ಕೆ ಸೇರ್ಪಡೆಯಾಗಿ ಡಿಸಿಎಂ ಸ್ಥಾನ ಗಿಟ್ಟಿಸಿದ್ದ ಲಕ್ಷ್ಮಣ್ ಸವದಿ ತಮಗೆ ಜಿಲ್ಲಾ ಉಸ್ತುವಾರಿ ನೀಡುವಂತೆ ಸಿಎಂಗೆ ಮನವಿ ಮಾಡಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಕೂಡ ಬೆಳಗಾವಿ ಉಸ್ತುವಾರಿ ಮೇಲೆ ಕಣ್ಣಿಟ್ಟಿದ್ದಾರೆ. 2ನೇ ಹಂತದ ಸಚಿವ ಸಂಪುಟ ವಿಸ್ತರಣೆ ವೇಳೆ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನದ ಆಶ್ವಾಸನೆಯನ್ನು ನೀಡಲಾಗಿದೆ. ಜೊತೆಗೆ ಅನರ್ಹಗೊಂಡಿರುವ ರಮೇಶ್ ಜಾರಕಿಹೊಳಿ ಅಪ್ಪಿತಪ್ಪಿ ಸಂಪುಟಕ್ಕೆ ಸೇರುವಂತಹ ಸಂದರ್ಭ ಒದಗಿ ಬಂದರೆ ಅವರು ಕೂಡ ಆಕಾಂಕ್ಷಿಯಾಗಿದ್ದಾರೆ.
ಹೀಗಾಗಿ ಈ ಜಿಲ್ಲೆಯನ್ನು ಯಾರ ಸುಪರ್ದಿಗೆ ನೀಡಬೇಕೆಂಬುದು ಬಿಎಸ್ವೈಗೆ ಕಗ್ಗಂಟಾಗಿದೆ. ಉಳಿದಂತೆ ಬೇರೆ ಜಿಲ್ಲೆಗಳಲ್ಲಿ ಉಸ್ತುವಾರಿಗಳನ್ನು ನೇಮಕ ಮಾಡಲು ಸಣ್ಣಪುಟ್ಟ ಸಮಸ್ಯೆಗಳು ಬಿಟ್ಟರೆ ಯಾವುದೇ ತೊಂದರೆಗಳು ಇಲ್ಲ.
ಧಾರವಾಡಕ್ಕೆ ಜಗದೀಶ್ ಶೆಟ್ಟರ್, ಶಿವಮೊಗ್ಗಕ್ಕೆ ಕೆ.ಎಸ್.ಈಶ್ವರಪ್ಪ , ಉಡುಪಿಗೆ ಕೋಟಾ ಶ್ರೀನಿವಾಸ್ ಪೂಜಾರಿ, ಚಿಕ್ಕಮಗಳೂರಿಗೆ ಸಿ.ಟಿ.ರವಿ, ಹಾವೇರಿಗೆ ಬಸವರಾಜ್ ಬೊಮ್ಮಾಯಿ, ತುಮಕೂರಿಗೆ ಮಾಧುಸ್ವಾಮಿ, ಚಿತ್ರದುರ್ಗಕ್ಕೆ ಶ್ರೀರಾಮುಲು, ಬೀದರ್ಗೆ ಪ್ರಭು ಚವ್ಹಾಣ್, ಉಸ್ತುವಾರಿಗಳಾಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.
ಇದರ ಜೊತೆಗೆ ಕೆಲವು ಸಚಿವರಿಗೆ ಹೆಚ್ಚುವರಿ ಉಸ್ತುವಾರಿ ಸಿಗುವ ಸಂಭವವಿದೆ. ಸಂಪುಟದಲ್ಲಿ ಇನ್ನು 16 ಖಾತೆಗಳು ಬಾಕಿ ಉಳಿದಿವೆ.
ಇದೇ 11ರಂದು ಅನರ್ಹಗೊಂಡ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಶಾಸಕರ ಪರವಾಗಿ ನ್ಯಾಯಾಲಯ ತೀರ್ಪು ನೀಡಿದರೆ ಮತ್ತೆ ರಾಜಕೀಯ ಸ್ಥಿತ್ಯಂತರಗಳು ಬದಲಾವಣೆಯಾಗಲಿದೆ.
ಸದ್ಯಕ್ಕೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಸಚಿವ ಎಸ್.ಸುರೇಶ್ಕುಮಾರ್ಗೆ ಮಡಿಕೇರಿ, ವಿ.ಸೋಮಣ್ಣಗೆ ಮೈಸೂರಿನ ಜೊತೆಗೆ ಚಾಮರಾಜನಗರ, ಸಿ.ಟಿ.ರವಿಗೆ ಹೆಚ್ಚುವರಿಯಾಗಿ ಹಾಸನ, ಕೋಟಾಶ್ರೀನಿವಾಸ್ ಪೂಜಾರಿಗೆ ಉಡುಪಿ ಜೊತೆ ದಕ್ಷಿಣ ಕನ್ನಡ, ಶ್ರೀರಾಮುಲುಗೆ ಚಿತ್ರದುರ್ಗದ ಜೊತೆಗೆ ಬಳ್ಳಾರಿ, ಶಶಿಕಲಾ ಜೊಲ್ಲೆಗೆ ರಾಯಚೂರು ಇಲ್ಲವೇ ಯಾದಗಿರಿ, ಕೆ.ಎಸ್.ಈಶ್ವರಪ್ಪ ಅವರಿಗೆ ಶಿವಮೊಗ್ಗದ ಜೊತೆ ದಾವಣಗೆರೆ, ಡಿಸಿಎಂ ಅಶ್ವಥ್ ನಾರಾಯಣಗೆ ಚಿಕ್ಕಬಳ್ಳಾಪುರ, ಆರ್.ಅಶೋಕ್ಗೆ ಬೆಂಗಳೂರು ಜೊತೆಗೆ ರಾಮನಗರ ಜಿಲ್ಲೆಗಳ ಹೆಚ್ಚುವರಿ ಉಸ್ತುವಾರಿ ಸಿಗುವ ನಿರೀಕ್ಷೆಯಿದೆ.
ಸೋಮವಾರದ ನಂತರ ಜಿಲ್ಲಾ ಉಸ್ತುವಾರಿ ಸಚಿವರ ಹೆಸರುಗಳು ಘೋಷಣೆಯಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.