ಮತ್ತೆರಡು ಡಿಸಿಎಂ ಸ್ಥಾನವನ್ನು ಸೃಷ್ಟಿಸಲು ಮುಂದಾದ ಬಿಜೆಪಿ ಹೈಕಮಾಂಡ್

ಬೆಂಗಳೂರು,ಸೆ.7- ಸುಗಮ ಆಡಳಿತಕ್ಕಾಗಿ ಈಗಾಗಲೇ ಮೂರು ಉಪಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿರುವ ಬಿಜೆಪಿ ಕೇಂದ್ರ ವರಿಷ್ಠರು ಇದೀಗ ಪುನಃ ಮತ್ತೆರಡು ಡಿಸಿಎಂ ಸ್ಥಾನವನ್ನು ಸೃಷ್ಟಿಸಲು ಮುಂದಾಗಿದ್ದಾರೆ.

ಈ ಬಾರಿ ಪರಿಶಿಷ್ಟ ವರ್ಗ(ಎಸ್ಟಿ) ಹಾಗೂ ಕುರುಬ ಸಮುದಾಯದ ಇಬ್ಬರು ಪ್ರಭಾವಿ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಮೂಲಕ ಎಲ್ಲ ಸಮುದಾಯಗಳಿಗೂ ಸಾಮಾಜಿಕ ನ್ಯಾಯ ನೀಡುವ ಉದ್ದೇಶವನ್ನು ಬಿಜೆಪಿ ಹೊಂದಿದೆ.

ಪರಿಶಿಷ್ಟ ಸಮುದಾಯದಿಂದ ಬಿ.ಶ್ರೀರಾಮುಲು ಇಲ್ಲವೇ ಅನರ್ಹಗೊಂಡಿರುವ ಬೆಳಗಾವಿಯ ರಮೇಶ್ ಜಾರಕಿಹೊಳಿಗೆ ಡಿಸಿಎಂ ಸ್ಥಾನ ನೀಡಬೇಕೆಂಬ ಚಿಂತನೆ ವರಿಷ್ಠರಲ್ಲಿದೆ.

ಕುರುಬ ಸಮುದಾಯದಿಂದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ , ಕಾಂಗ್ರೆಸ್‍ನಿಂದ ಅನರ್ಹಗೊಂಡಿರುವ ಕೆ.ಆರ್.ಪುರಂನ ಭೆರತಿ ಬಸವರಾಜ್, ಜೆಡಿಎಸ್‍ನಿಂದ ಗೆದ್ದಿದ್ದ ಹುಣಸೂರಿನ ಎಚ್.ವಿಶ್ವನಾಥ್ ಮೂವರಲ್ಲಿ ಒಬ್ಬರಿಗೆ ಡಿಸಿಎಂ ಸ್ಥಾನ ಸಿಗುವುದು ಬಹುತೇಕ ಪಕ್ಕ ಆಗಿದೆ.

ಇದೇ 11ರಂದು ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡಿರುವ 17 ಶಾಸಕರ ಅನರ್ಹತೆ ಪ್ರಕರಣ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆಗೆ ಬರಲಿದೆ. ಒಂದು ವೇಳೆ ಹಿಂದಿನ ಸ್ಪೀಕರ್ ರಮೇಶ್‍ಕುಮಾರ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ ಶಾಸಕರ ರಾಜೀನಾಮೆಯನ್ನು ಅಂಗೀಕರಿಸುವಂತೆ ಹಾಲಿ ಸ್ಪೀಕರ್‍ಗೆ ಸೂಚಿಸಿದರೆ ಸಚಿವ ಸಂಪುಟ ವಿಸ್ತರಣೆಯಾಗುವುದು ಬಹುತೇಕ ಖಚಿತವಾಗಿದೆ.

ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ರಾಜೀನಾಮೆ ನೀಡಿದ್ದ 17 ಶಾಸಕರಲ್ಲಿ ಕನಿಷ್ಟ ಪಕ್ಷ 8ರಿಂದ 10 ಶಾಸಕರಿಗೆ ಸಂಪುಟದಲ್ಲಿ ಸ್ಥಾನಮಾನ ಸಿಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.

ರಾಜೀನಾಮೆ ನೀಡುವ ಮುನ್ನ ಶಾಸಕರಿಗೆ ಮಂತ್ರಿ ಸ್ಥಾನ ಹಾಗೂ ಕೆಲವರಿಗೆ ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನವನ್ನು ನೀಡುವ ಬಗ್ಗೆ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಆಶ್ವಾಸನೆ ಕೊಟ್ಟಿದ್ದರು.

ಜಾತಿಗೊಬ್ಬ ಡಿಸಿಎಂ:
ನೆರೆಯ ಆಂಧ್ರಪ್ರದೇಶದಲ್ಲಿ ಅಲ್ಲಿನ ಮುಖ್ಯಮಂತ್ರಿ ವೈ.ಎಸ್.ಆರ್.ಜಗಮೋಹನ್ ರೆಡ್ಡಿ ಒಂದೊಂದು ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡಿದ್ದಾರೆ. ಇದೀಗ ಇದೇ ಮಾದರಿಯನ್ನು ಅನುಸರಿಸಲು ಮುಂದಾಗಿರುವ ಬಿಜೆಪಿ ನಾಯಕರು ಸಮುದಾಯಕ್ಕೊಬ್ಬರಂತೆ ಉಪಮುಖ್ಯಮಂತ್ರಿ ಸ್ಥಾನ ನೀಡಿ ಎಲ್ಲರನ್ನು ಓಲೈಸಿಕೊಳ್ಳಲು ಚಿಂತನೆ ನಡೆಸಿದ್ದಾರೆ.

ಕಳೆದ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಲಿಂಗಾಯಿತ, ಬ್ರಾಹ್ಮಣ, ದಲಿತ ಸಮುದಾಯದ ಎಡಗೈ, ಕೆಲವು ಹಿಂದುಳಿದ ವರ್ಗದ ಸಮುದಾಯಗಳು ಬಿಜೆಪಿ ಬೆನ್ನಿಗೆ ನಿಂತಿದ್ದವು.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಹುತೇಕ ಎಲ್ಲ ಸಮುದಾಯಗಳ ಮತಗಳನ್ನು ಪಡೆಯುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಅದರಲ್ಲೂ ಮೈಸೂರು ಭಾಗದಲ್ಲಿ ಪ್ರಬಲವಾಗಿರುವ ಒಕ್ಕಲಿಗ ಸಮುದಾಯದ ಭದ್ರಕೋಟೆಯನ್ನೇ ಕಮಲ ಪಡೆ ಬೇಧಿಸುವಲ್ಲಿ ಯಶಸ್ವಿಯಾಗಿತ್ತು.

ಈಗ ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಸಮುದಾಯಗಳಿಗೆ ಆದ್ಯತೆ ನೀಡಿ ಈಗಿನಿಂದಲೇ ಮತ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.

ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ವೇಳೆ ಇಬ್ಬರಿಗೆ ಡಿಸಿಎಂ ಸ್ಥಾನ ಸಿಗುವುದು ಖಚಿತ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ