ನವದೆಹಲಿ, ಸೆ.6- ಬಹು ಕೋಟಿ ರೂ.ಗಳ ಏರ್ಸೆಲ್ ಮಾಕ್ಸಿಸ್ ಪ್ರಕರಣದಲ್ಲಿ ಆರೋಪಿಯಾಗಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರ ಪುತ್ರ , ಉದ್ಯಮಿ ಮತ್ತು ಸಂಸದ ಕಾರ್ತಿ ಚಿದಂಬರಂ ವಿದೇಶಿ ಪ್ರವಾಸಕ್ಕೆ ತೆರಳಲು ಸರ್ವೋಚ್ಚ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ಠೇವಣಿ ಇರಿಸಿದ್ದ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ವಿದೇಶಿ ಪ್ರವಾಸಕ್ಕೆ ತೆರಳುವ ಮುನ್ನ ತಾವು ನಿಶ್ಚಿತ ಠೇವಣಿ (ಎಫ್ಡಿ) ಮೊತ್ತ 10 ಕೋಟಿ ರೂ.ಗಳನ್ನು ಹಿಂದಿರುಗಿಸುವಂತೆ ಸುಪ್ರೀಂಕೋರ್ಟ್ಗೆ ಮನವಿ ಸಲ್ಲಿಸಿದ್ದರು.
ಆದರೆ ನ್ಯಾ.ದೀಪಕ್ ಗುಪ್ತಾ, ಕಾರ್ತಿ ಅವರ ಮನವಿಯನ್ನು ತಳ್ಳಿ ಹಾಕಿ ಇನ್ನು ಮೂರು ತಿಂಗಳುಗಳ ಕಾಲ 10 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಇನ್ನು ಮೂರು ತಿಂಗಳುಗಳ ಕಾಲ ನಿಶ್ಚಿತ ಠೇವಣಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲೇ ಉಳಿಯಲಿದೆ. ಆ ಮೊತ್ತವನ್ನು ಯಾವಾಗ ಹಿಂದಿರುಗಿಸಬೇಕು ಎಂಬುದನ್ನು ಕೋರ್ಟ್ ನಂತರ ನಿರ್ಧರಿಸುತ್ತದೆ ಎಂದು ನ್ಯಾಯಮೂರ್ತಿ ತಿಳಿಸಿದರು.
10 ಕೋಟಿ ರೂ.ಗಳ ಠೇವಣಿ ಮೊತ್ತವನ್ನು ಬಿಡುಗಡೆ ಮಾಡುವಂತೆ ಕೋರಿ ಕಾರ್ತಿ ಸಲ್ಲಿಸಿದ್ದ ಮನವಿ ಅರ್ಜಿಯನ್ನು ಸುಪ್ರೀಂಕೋರ್ಟ್ ಮೇ ತಿಂಗಳಿನಲ್ಲೂ ಸಹ ನಿರಾಕರಿಸಿತ್ತು.