ತಾಳ್ಮೆ ಮತ್ತು ಸಹನೆಗೂ ಒಂದು ಮಿತಿಯಿದೆ-ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು

ನವದೆಹಲಿ, ಸೆ.6- ನಮ್ಮ ತಾಳ್ಮೆ ಮತ್ತು ಸಹನೆಗೂ ಒಂದು ಮಿತಿ ಇದೆ. ನಮ್ಮನ್ನು ವಿನಾಕಾರಣ ಕೆಳಕಿ ದಾಳಿ ಮಾಡಿದರೆ ಜೀವನ ಪರ್ಯಂತ ನೆನಪಿಟ್ಟುಕೊಳ್ಳುವಂತಹ ದಿಟ್ಟ ಪ್ರತ್ಯುತ್ತರ ನೀಡುತ್ತೇವೆ ಎಂದು ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಪಾಕಿಸ್ತಾನಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಕಾಶ್ಮೀರ ಪ್ರಾಂತ್ಯದ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಸಜ್ಜಾಗಿ ಯುದ್ಧೋನ್ಮಾದ ಪ್ರದರ್ಶಿಸುತ್ತಿರುವ ಸಂದರ್ಭದಲ್ಲೇ ನಾಯ್ಡು ಅವರ ಈ ಗಂಭೀರ ಎಚ್ಚರಿಕೆ ಭಾರೀ ಮಹತ್ವ ಪಡೆದುಕೊಂಡಿದೆ.

ಭಾರತವು ಸದಾ ಶಾಂತಿ ಬಯಸುತ್ತದೆ. ನಾವು ಎಲ್ಲ ವಿಷಯಗಳಲ್ಲೂ ಗರಿಷ್ಠ ಸಂಯಮ ತೋರುತ್ತಿದ್ದೇವೆ. ನಮ್ಮ ಪಕ್ಕದ ದೇಶ ಆಗಾಗ ಪ್ರಚೋದನಾಕಾರಿ ದಾಳಿ ನಡೆಸುತ್ತಿದೆ. ಆದರೂ ನಾವು ಮೌನವಾಗಿದ್ದೇವೆ. ಇನ್ನೂ ಮಿತಿಮೀರಿ ನಮ್ಮ ಮೇಲೆ ಆಕ್ರಮಣ ಮಾಡಿದರೆ ನಾವು ನೀಡುವ ತಕ್ಕ ಪ್ರತ್ಯುತ್ತರ ಜನ್ಮ ಜನ್ಮಾಂತರಕ್ಕೂ ನೆನಪಿನಲ್ಲಿ ಉಳಿಯುತ್ತದೆ ಎಂದು ಗಂಭೀರ ಎಚ್ಚರಿಕೆ ನೀಡಿದರು.

ದೆಹಲಿಯಲ್ಲಿಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಎರಡು ವರ್ಷಗಳ ಅವಧಿಯಲ್ಲಿ ಮಾಡಿದ 95 ಭಾಷಣಗಳ ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಉಪರಾಷ್ಟ್ರಪತಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಪಕ್ಕದ ದೇಶಗಳ ಅಪ್ರಚೋದಿತ ಕೃತ್ಯಗಳು ಮಿತಿಮೀರುತ್ತಿವೆ. ನಾವು ಇದನ್ನು ನೋಡುತ್ತಲೇ ಇದ್ದೇವೆ. ಇದು ಮುಂದುವರಿದಿದ್ದೇ ಆದರೆ ಆ ದೇಶ ಜೀವನ ಪರ್ಯಂತ ಮರೆಯಲಾಗದ ದಿಟ್ಟ ನೀಡುತ್ತೇವೆ. ನಮ್ಮ ದಾಳಿ ಅತ್ಯಂತ ಆಕ್ರಮಣಕಾರಿಯಾಗಿರುತ್ತದೆ ಎಂದು ಉಪರಾಷ್ಟ್ರಪತಿ ಹೇಳಿದರು.

ಇದನ್ನು ಆ ದೇಶದ ಪ್ರತಿಯೊಬ್ಬರೂ ಅದರಲ್ಲೂ ವಿಶೇಷವಾಗಿ ಪ್ರಚೋದನಾಕಾರಿ ಕೃತ್ಯ ನಡೆಸುತ್ತಿರುವವರು ನೆನಪಿಟ್ಟುಕೊಳ್ಳಬೇಕು ಎಂದು ರಾಜ್ಯಸಭಾ ಸಭಾಪತಿಯೂ ಆದ ನಾಯ್ಡು ವಾರ್ನಿಂಗ್ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ