
ನವದೆಹಲಿ, ಸೆ.6- ಬಹುಕೋಟಿ ರೂ.ಗಳ ಐಎನ್ಎಕ್ಸ್ ಮೀಡಿಯಾ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಇಂದು ಬೆಳಗ್ಗೆ ಲಘು ಉಪಾಹಾರದೊಂದಿಗೆ ಕಾರಾಗೃಹದ ದಿನಚರಿ ಆರಂಭಿಸಿದರು.
ನಿನ್ನೆ ಸಂಜೆ ಅವರನ್ನು ತಿಹಾರ್ ಜೈಲ್ಗೆ ಕರೆತರಲಾಗಿತ್ತು. ವೈದ್ಯಕೀಯ ತಪಾಸಣೆ ನಂತರ ಕಾಂಗ್ರೆಸ್ ಪ್ರಭಾವಿ ನಾಯಕ ಚಿದಂಬರಂ ಅವರನ್ನು ಜೈಲಿನ ಕೊಠಡಿ ಸಂಖ್ಯೆ 7ರಲ್ಲಿ ಇರಿಸಲಾಗಿದೆ. ನಿನ್ನೆ ರಾತ್ರಿ ರೋಟಿ, ದಾಲ್, ಸಬ್ಜಿ ಮತ್ತು ಅನ್ನ ಸೇವಿಸಿ ನಿದ್ರಿಸಿದ ಚಿದಂಬರಂ ಅವರಿಗೆ ಜೈಲಿನ ಸಿಬ್ಬಂದಿ ಲಘು ಉಪಾಹಾರ ನೀಡಿದರು.
ಚಿದು ಅವರಿಗೆ ಪ್ರತ್ಯೇಕ ಕೊಠಡಿ ಮತ್ತು ವೆಸ್ಟರ್ನ್ ಟಾಯ್ಲೆಟ್ ಹೊರತುಪಡಿಸಿ ಬೇರೆ ಯಾವುದೇ ಸೌಲಭ್ಯವನ್ನು ಕೋರ್ಟ್ ಆದೇಶದ ಮೇರೆಗೆ ಚಿದಂಬರಂ ಅವರಿಗೆ ನೀಡಲಾಗಿಲ್ಲ.
ಚಿದಂಬರಂ ಸಾಮಾನ್ಯ ಖೈದಿಗಳಂತೆ ಎರಡುವಾರಗಳ ಕಾಲ ಬಂಧೀಖಾನೆಯಲ್ಲಿರಬೇಕು. ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಎಲ್ಲಾ ಸೆರೆವಾಸಿಗಳಂತೆ ಗ್ರಂಥಾಲಯ ಮತ್ತು ಟಿವಿ ವೀಕ್ಷಣೆಗೆ ಅವಕಾಶವಿದೆ.