ಬೆಂಗಳೂರು, ಸೆ.5- ರಾಜ್ಯದ ಬೆಳಗಾವಿ, ಕೊಡಗು, ಶಿವಮೊಗ್ಗ ಜಿಲ್ಲೆಗಳನ್ನು ರೆಡ್ ಅಲರ್ಟ್ ಎಂದು ಘೋಷಿಸಲಾಗಿದ್ದು, ಕೇಂದ್ರದ ಎನ್ಡಿಆರ್ಎಫ್ನ ಮೂರು ತಂಡಗಳು ಇಂದು ರಾಜ್ಯಕ್ಕೆ ಆಗಮಿಸುತ್ತಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಪುಣೆಯಿಂದ ಮೂರು ಎನ್ಡಿಆರ್ಎಫ್ ತಂಡಗಳು ಬೆಳಗಾವಿಗೆ ಆಗಮಿಸಲಿವೆ. ಮಹಾರಾಷ್ಟ್ರದಿಂದ ಮತ್ತೆ ನೀರು ಬಿಟ್ಟಿರುವುದರಿಂದ ಪುನಃ ಪ್ರವಾಹ ಸಂಭವಿಸುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯಕ್ಕೆ ಎನ್ಡಿಆರ್ಎಫ್ ತಂಡವನ್ನು ಕೋರಲಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಲಿಂಗನಮಕ್ಕಿ ಜಲಾಶಯದಲ್ಲೂ ಹೆಚ್ಚು ಮಳೆಯಾಗುತ್ತಿದೆ. ಅದೇ ರೀತಿ ಕೊಡಗಿನಲ್ಲೂ ಹೆಚ್ಚು ಮಳೆಯಾಗುತ್ತಿದೆ. ಹಾಗಾಗಿ ಈ ಮೂರೂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ನೆರೆ ಸಂತ್ರಸ್ತರಿಗಾಗಿ ತೆರೆಯಲಾಗಿರುವ ಕೇಂದ್ರಗಳನ್ನು ಗಂಜಿ ಕೇಂದ್ರ, ನಿರಾಶ್ರಿತ ಕೇಂದ್ರಗಳೆಂದು ಕರೆಯಬಾರದು. ಅವುಗಳನ್ನು ಕಾಳಜಿ ಕೇಂದ್ರಗಳೆಂದು ಕರೆಯಬೇಕು. ಈ ಸಂಬಂಧ ಆದೇಶ ಹೊರಡಿಸಲು ಕಂದಾಯ ಇಲಾಖೆ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಈ ಕೇಂದ್ರದಲ್ಲೇ ವಾಸ್ತವ್ಯ ಹೂಡಿ ಊಟ, ಶುಚಿತ್ವ, ವೈದ್ಯಕೀಯ ಸೇವೆಗಳನ್ನು ಖುದ್ದು ಪರಿಶೀಲಿಸುವುದಾಗಿ ತಿಳಿಸಿದರು.
ಮನೆ ಕಳೆದುಕೊಂಡಿರುವವರು ತಾತ್ಕಾಲಿಕವಾಗಿ ಶೆಡ್ಗಳನ್ನು ನಿರ್ಮಿಸಿಕೊಳ್ಳಲು ಮುಂದಾದರೆ ತಕ್ಷಣ 50 ಸಾವಿರ ರೂ. ಬಿಡುಗಡೆ ಮಾಡಲಾಗುವುದು. ಕೆಲವರಿಗೆ ಬಾಡಿಗೆ ಮನೆ ಸಿಗುವುದಿಲ್ಲ. ಕೆಲವರಿಗೆ ಬಾಡಿಗೆ ಮನೆ ಇಷ್ಟವಾಗುವುದಿಲ್ಲ. ಹಾಗಾಗಿ ಜಿಲ್ಲಾಡಳಿತ ಗುರುತಿಸಿರುವ ಸ್ಥಳದಲ್ಲಿ ಮನೆ ಕಟ್ಟಿಕೊಳ್ಳಲು ತಕ್ಷಣ 50 ಸಾವಿರ ರೂ. ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದರು.
ನೆರೆ ಸಂತ್ರಸ್ತರಿಗೆ ಮೊದಲ ಹಂತವಾಗಿ 10 ಸಾವಿರ ರೂ. ಪರಿಹಾರ ಧನ ನೀಡಲಾಗುತ್ತಿದೆ. ಪ್ರತಿಯೊಬ್ಬ ಅರ್ಹರಿಗೂ ಪರಿಹಾರ ಧನ ನೀಡಲು ಯೋಜನೆ ರೂಪಿಸಲಾಗಿದೆ. ಈ ಹಣ ದುರ್ಬಳಕೆಯಾಗದಂತೆ ತಡೆಯಲು ಸ್ಕ್ವಾಡ್ ರಚನೆ ಮಾಡಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ.
ಪ್ರವಾಹ ಪೀಡಿತ ಬೆಳಗಾವಿ ಜಿಲ್ಲೆಗೆ 30 ಕೋಟಿ, ಶಿವಮೊಗ್ಗ ಜಿಲ್ಲೆಗೆ 10 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
ದೇಣಿಗೆ ಸಂಗ್ರಹ: ನನಗೆ ಅಭಿನಂದನೆ ಸಲ್ಲಿಸಲು ಬರುವ ಅಭಿಮಾನಿಗಳು, ಹಿತೈಷಿಗಳು, ಶಾಸಕರು, ಮಾಜಿ ಶಾಸಕರು, ಮುಖಂಡರು ಹಾರ-ತುರಾಯಿ ನೀಡುವ ಬದಲಾಗಿ ನೆರೆ ಸಂತ್ರಸ್ತರಿಗೆ ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಮನೆ ಹಾಗೂ ಕಚೇರಿ ಎರಡೂ ಕಡೆ ದೇಣಿಗೆ ಸಂಗ್ರಹ ನಡೆಯುತ್ತಿದೆ. 10 ದಿನಗಳ ನಂತರ ದೇಣಿಗೆ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲಾಗುವುದು. ಇದುವರೆಗೆ 4 ಲಕ್ಷ ರೂ. ದೇಣಿಗೆ ಸಂಗ್ರಹವಾಗಿದೆ ಎಂದು ಇದೇ ವೇಳೆ ಅಶೋಕ್ ತಿಳಿಸಿದರು.