ಬೆಂಗಳೂರು, ಸೆ.5- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ ಖಂಡಿಸಿ ಎರಡನೇ ದಿನವೂ ಪ್ರತಿಭಟನೆ ಮುಂದುವರೆದಿದ್ದು, ರಾಮನಗರ ಜಿಲ್ಲೆಯಲ್ಲಿ ಬಂದ್ ಯಶಸ್ವಿಯಾಗಿದೆ. ರಾಜ್ಯದ ಹಲವೆಡೆ ರಸ್ತೆ ತಡೆ, ಧರಣಿ, ಸತ್ಯಾಗ್ರಹಗಳು ನಡೆದಿವೆ.
ಡಿ.ಕೆ.ಶಿವಕುಮಾರ್ ಅವರ ಬಂಧನ ವಿರೋಧಿಸಿ ರಾಮನಗರ ಜಿಲ್ಲಾ ಬಂದ್‍ಗೆ ಇಂದು ಕರೆ ನೀಡಲಾಗಿತ್ತು. ನಿನ್ನೆ ನಡೆದ ಪ್ರತಿಭಟನೆಯಲ್ಲಿ ಹಲವೆಡೆ ಕಲ್ಲು ತೂರಾಟವಾಗಿ ಬಸ್‍ಗಳಿಗೆ ಬೆಂಕಿ ಹಚ್ಚಿದ್ದರಿಂದಾಗಿ ಯಾವುದೇ ಬಸ್‍ಗಳು ರಸ್ತೆಗಿಳಿಯಲಿಲ್ಲ.
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪ್ರಯಾಣಿಕರು ವಾಹನಗಳಿಲ್ಲದೆ ಪರದಾಡುವಂತಾಯಿತು. ಮುಂಜಾಗ್ರತಾ ಪ್ರಕವಾಗಿ ಜಿಲ್ಲೆಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ರಾಮನಗರ ಬದಲಾಗಿ ಬಸ್‍ಗಳು ಕುಣಿಗಲ್, ಬೆಳ್ಳೂರು ಕ್ರಾಸ್, ನಾಗಮಂಗಲ ಮೂಲಕ ಮೈಸೂರು ಮಾರ್ಗವಾಗಿ ಚಲಿಸಲು ಪೊಲೀಸರು ಸೂಚನೆ ನೀಡಿದ್ದರು. ಯಾವುದೇ ಅನಾಹುತಗಳು ಸಂಭವಿಸದಂತೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಡಿ.ಕೆ.ಶಿವಕುಮಾರ್ ಅವರ ಸ್ವ ಕ್ಷೇತ್ರ ಕನಕಪುರದಲ್ಲೂ ಭಾರೀ ಪ್ರತಿಭಟನೆ ನಡೆದು ಅಂಗಡಿ ಮುಂಗಟ್ಟುಗಳು ಕೂಡ ಮುಚ್ಚಲ್ಪಟ್ಟಿದ್ದವು.
ಇದೇ ರೀತಿ ಮಾಗಡಿ, ಚನ್ನಪಟ್ಟಣ, ಹೊಸಕೋಟೆ, ಗೌರಿಬಿದನೂರು ಸೇರಿದಂತೆ ಮತ್ತಿತರ ಕಡೆಗಳಲ್ಲೂ ಇಂದೂ ಕೂಡ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.