ನಿಮ್ಮ ಆಟಗಳೇನಿದ್ದರೂ ಕರ್ನಾಟಕದಲ್ಲಿ ಇಟ್ಟುಕೊಳ್ಳಿ-ಸೇನೆಯ ಅಧಿಕಾರಿಗಳಿಂದ ರಾಜ್ಯ ನಾಯಕರುಗಳಿಗೆ ಧಮ್ಕಿ

ಬೆಂಗಳೂರು, ಸೆ.4- ಬಂಧನಕ್ಕೊಳಗಾಗಿರುವ ಡಿ.ಕೆ.ಶಿವಕುಮಾರ್ ಅವರಿಗೆ ಮಾತ್ರೆ ನೀಡಲು ಬಿಡದೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಿಗ್ಭಂದನ ವಿಧಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.

ನಿನ್ನೆ ರಾತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುತ್ತಿದ್ದಂತೆ ಅವರನ್ನು ಭೇಟಿ ಮಾಡಲು ಯಾರಿಗೂ ಅವಕಾಶ ನೀಡಿಲ್ಲ. ಅವರ ಸಹೋಧರ ಹಾಗೂ ಸಂಸದ ಡಿ.ಕೆ.ಸುರೇಶ್ ಅವರು ತಮ್ಮ ಅಣ್ಣನಿಗೆ ಮಾತ್ರೆ ನೀಡಬೇಕು, ಬಿಪಿ-ಶುಗರ್ ಸಂಬಂಧಪಟ್ಟಂತೆ ಅವರಿಗೆ ಪ್ರತಿನಿತ್ಯ ಮಾತ್ರೆಗಳನ್ನು ಕೊಡಲಾಗುತ್ತದೆ. ಅವುಗಳನ್ನು ಕೊಡಲು ಬಿಡಿ ಎಂದು ಮನವಿ ಮಾಡಿಕೊಂಡರೂ ಅದಕ್ಕೆ ಇಡಿ ಅಧಿಕಾರಿಗಳು ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಕುಣಿಗಲ್ ಕ್ಷೇತ್ರದ ಶಾಸಕರಾದ ಡಾ.ರಂಗನಾಥ್ ಅವರು ಖುದ್ದು ವೈದ್ಯರಾಗಿದ್ದು, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಿಡಿ ಎಂದು ಮನವಿ ಮಾಡಿದರೂ ಅವಕಾಶ ನೀಡಲಿಲ್ಲ ಎಂದು ಹೇಳಲಾಗಿದೆ.

ನಾಲ್ಕು ದಿನಗಳ ವಿಚಾರಣೆ ನಂತರ ನಿನ್ನೆ ರಾತ್ರಿ ಡಿಕೆಶಿ ಅವರನ್ನು ಬಂಧನಕ್ಕೊಳಪಡಿಸಿದ್ದು ನಂತರ ರಾಮಮನೋಹರ ಲೋಹಿಯ(ಆರ್‍ಎಂಎಲ್) ಆಸ್ಪತ್ರೆಯಲ್ಲಿ ಬಿಪಿ, ಶುಗರ್ ಸೇರಿದಂತೆ ಹಲವಾರು ಪರೀಕ್ಷೆಗಳನ್ನು ಮಾಡಿಸಿ ರಕ್ತದ ಮಾದರಿ ಪಡೆದು ಅಗತ್ಯವಾದ ಇತರೆ ಪರೀಕ್ಷೆಗಳನ್ನು ಮಾಡಿಸಲಾಗಿದೆ.

ಬಂಧನವನ್ನು ಅಧಿಕೃತವಾಗಿ ಪ್ರಕಟಿಸುತ್ತಿದ್ದಂತೆ ಕುಟುಂಬ ಸದಸ್ಯರಿಗೂ ಡಿಕೆಶಿ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿಲ್ಲ ಎಂದು ಹೇಳಲಾಗಿದೆ.
ಆರ್‍ಎಂಎಲ್ ಆಸ್ಪತ್ರೆ ಬಳಿ ಸಾವಿರಾರು ಜನ ಜಮಾಯಿಸಿದ್ದರಿಂದ ತಕ್ಷಣವೇ ಕೇಂದ್ರ ಮೀಸಲು ಪಡೆ(ಸಿಆರ್‍ಪಿಎಫ್) ಮತ್ತು ಅರೆಸೇನಾ ತುಕಡಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ರಾಜ್ಯದಿಂದ ಸಾವಿರಾರು ಮಂದಿ ಆಗಮಿಸಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಮುಂದಾದಾಗ ತಳ್ಳಾಟನೂಕಾಟ ನಡೆದಿದೆ. ನಿಮ್ಮ ಆಟಗಳೇನಿದ್ದರೂ ಕರ್ನಾಟಕದಲ್ಲಿ ಇಟ್ಟುಕೊಳ್ಳಿ ಇದು ಡೆಲ್ಲಿ. ಇಲ್ಲಿ ಅದೆಲ್ಲ ನಡೆಯುವುದಿಲ್ಲ ಎಂದು ಸೇನೆಯ ಅಧಿಕಾರಿಗಳು ರಾಜ್ಯ ನಾಯಕರುಗಳಿಗೆ ಧಮ್ಕಿ ಹಾಕಿ ಕಳುಹಿಸಿದ್ದಾರೆ ಎನ್ನಲಾಗಿದೆ.

ನಿನ್ನೆ ರಾತ್ರಿಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಆರಂಭದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಎದೆನೋವು ಕಾಣಿಸಿಕೊಂಡು, ರಕ್ತದೊತ್ತಡ ಏರುಪೇರಾಗಿತ್ತು. ತಡರಾತ್ರಿ ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ