ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು,ಸೆ.4- ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವ ಅಗತ್ಯ ಇರಲಿಲ್ಲ. ಬಿಜೆಪಿ ರಾಜಕೀಯ ದುರುದ್ದೇಶದಿಂದ ಎಲ್ಲವನ್ನೂ ಮಾಡುತ್ತಿದ್ದು, ರಾಜ್ಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೂ ಇದು ತಿಳಿದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್‍ನ್ನು ಅನುಸರಿಸಿ ವಿಚಾರಣೆಗೆ ಹಾಜರಾಗಿದ್ದಾರೆ. ಸಮನ್ಸ್ ಉಲ್ಲಂಘಿಸಿದ್ದರೆ ಬಂಧಿಸುವುದರಲ್ಲಿ ಅರ್ಥವಿರುತ್ತಿತ್ತು. ನಾಲ್ಕು ದಿನಗಳು ವಿಚಾರಣೆಗೆ ಹಾಜರಾಗಿ ಎಲ್ಲ ರೀತಿ ಸಹಕರಿಸಿದ್ದರೂ ಬಂಧಿಸಿರುವುದು ಸೇಡಿನ ರಾಜಕಾರಣ ಎಂದರು.

ವಿಚಾರಣೆ ವೇಳೆ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲಿಲ್ಲ ಎಂಬುದು ನೆಪ ಮಾತ್ರ. ಈ ಬಂಧನದ ನಂತರ ಅವರ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೆಯೇ? ಸಾಕ್ಷ್ಯ ನಾಶ ಮಾಡುವುದು ಅಥವಾ ಸಾಕ್ಷ್ಯ ಖರೀದಿಸಿದ್ದಾರೆ ಎಂಬ ಆತಂಕ ಇದ್ದಾಗ ಕೆಲವು ಪ್ರಕರಣಗಳಲ್ಲಿ ಬಂಧಿಸಲಾಗುತ್ತದೆ. ಆದರೆ ಡಿಕೆಶಿ ಅವರ ಪ್ರಕರಣದಲ್ಲಿ ಆರೀತಿ ಯಾವ ಸಾಧ್ಯತೆಗಳು ಇರಲಿಲ್ಲ. ಆದರೂ ಬಂಧಿಸಲಾಗಿದೆ ಎಂದು ಆರೋಪಿಸಿದರು.

ವಿಚಾರಣೆ ನಡೆಸಿದ ಅಧಿಕಾರಿಗಳು ಗುಜರಾತಿನ ಶಾಸಕರನ್ನು ನಿಮ್ಮ ವಶದಲ್ಲಿ ಏಕೆ ಇಟ್ಟುಕೊಂಡಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ವಿಷಯ. ಅದನ್ನು ಅಧಿಕಾರಿಗಳು ಪ್ರಶ್ನಿಸಿರುವುದರ ಹಿಂದೆ ರಾಜಕೀಯ ದುರದ್ದೇಶ ಸ್ಪಷ್ಟವಾಗಿದೆ. ಹೀಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ಮುಗಿಸುತ್ತೇವೆ ಎಂಬ ನಂಬಿಕೆಯನ್ನು ಬಿಜೆಪಿ ಹೊಂದಿದ್ದರೆ ಅದು ಸಾಧ್ಯವೇ ಇಲ್ಲ. ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ ಸರ್ವಾಧಿಕಾರಿ ಧೋರಣೆ ನಡೆಸುವುದು ಸಾಧ್ಯವಿಲ್ಲ.

ನಾವು ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಡಿ.ಕೆ.ಶಿವಕುಮಾರ್ ಅವರ ಬಂಧನದ ಬಗ್ಗೆ ಯಡಿಯೂರಪ್ಪನವರಿಗೆ ಮಾಹಿತಿ ಇತ್ತು. ಬಿಜೆಪಿಯೇ ಮುಂದೆ ನಿಂತು ಎಲ್ಲವನ್ನೂ ಮಾಡುತ್ತಿದೆ. ಯಡಿಯೂರಪ್ಪನವರಿಗೆ ಹೇಳದೆ ಇದನ್ನೆಲ್ಲ ಮಾಡಲು ಸಾದ್ಯವಿಲ್ಲ. ತನಗೇನೂ ಗೊತ್ತಿಲ್ಲ ಎಂದು ಅವರು ಹೇಳಿದರೆ ಅದು ಸುಳ್ಳು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ