ಬೆಂಗಳೂರು, ಸೆ.4-ಅಕ್ರಮ ಹಣದ ವಹಿವಾಟಿನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಂದ ಬಂಧನಕ್ಕೊಳಪಟ್ಟಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಪ್ರತಿಭಟನೆ ನಡೆಸಬಹುದು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸ ಸೇರಿದಂತೆ ಕೇಂದ್ರದ ಸ್ವಯತ್ತ ಸಂಸ್ಥೆಗಳಿಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ನಿವಾಸ, ಗಂಗಾನಗರದಲ್ಲಿರುವ ಸಿಬಿಐ ಕಚೇರಿ, ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಮಹಡಿಯಲ್ಲಿರುವ ಇಡಿ ಕಚೇರಿ, ಇಂಡಿಯನ್ ಎಕ್ಸ್ಪ್ರೆಸ್ ಸರ್ಕಲ್ ಬಳಿ ಇರುವ ಐಟಿ ಕಚೇರಿಗೆ ಭದ್ರತೆ ಒದಗಿಸಲಾಗಿದೆ.
ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಇಲ್ಲವೇ ಮುತ್ತಿಗೆ ಹಾಕಬಹುದು ಎಂಬ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ನಿವಾಸದ ಸುತ್ತಮುತ್ತ ನಿನ್ನೆ ರಾತ್ರಿಯಿಂದಲೇ ಬಿಗಿ ಭದ್ರತೆ ಒದಗಿಸಲಾಗಿತ್ತು.
ಧವಳಗಿರಿ ನಿವಾಸದ ಸುತ್ತಮುತ್ತಲೂ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಡಿಸಿಪಿಯೊಬ್ಬರು, ಎಸಿಪಿ, ಇನ್ಸ್ಪೆಕ್ಟರ್ಗಳು, ಕೆಎಸ್ಆರ್ಪಿ ಸೇರಿದಂತೆ ವಿವಿಧ ಶ್ರೇಣಿಯ ಭದ್ರತೆಯನ್ನು ಒದಗಿಸಲಾಗಿದೆ. ಮನೆಯ ಸುತ್ತಮುತ್ತ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಯಾರೇ ಮನೆಗೆ ಬಂದರೂ ಬಿಗಿ ತಪಾಸಣೆ ನಡೆಸಿ ಒಳ ಬಿಡಲಾಗುತ್ತಿದೆ.
ಮುಖ್ಯ ರಸ್ತೆಯಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಇನ್ನು ಗಂಗಾನಗರದಲ್ಲಿರುವ ಸಿಬಿಐ ಕಚೇರಿಗೂ ಕಳೆದ ರಾತ್ರಿಯಿಂದಲೇ ಭಾರೀ ಭದ್ರತೆ ಒದಗಿಸಲಾಗಿದ್ದು, ಕಚೇರಿ ಸುತ್ತಮುತ್ತ ಸ್ಥಳೀಯ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜತೆಗೆ ಸುತ್ತಮುತ್ತ ಬ್ಯಾರಿಕೇಡ್ಗಳನ್ನು ಹಾಕಲಾಗಿದ್ದು, ಯಾರೊಬ್ಬರೂ ಪ್ರತಿಭಟನೆ ನಡೆಸದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಹುಮಹಡಿ ಕಟ್ಟಡದಲ್ಲಿರುವ ಇಡಿ ಕಚೇರಿಗೆ ರಾತ್ರಿಯಿಂದಲೇ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ಸಂದರ್ಭದಲ್ಲೂ ಡಿ.ಕೆ.ಶಿವಕುಮಾರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಇಲ್ಲವೇ ಮುತ್ತಿಗೆ ಹಾಕಬಹುದು ಎಂಬ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ರೀತಿ ಐಟಿ ಇಲಾಖೆಗಳಿರುವ ಕಚೇರಿಗಳಿಗೂ ಸಹ ಮುನ್ನೆಚ್ಚರಿಕೆಯಿಂದಾಗಿ ಭದ್ರತೆಯನ್ನು ಒದಗಿಸಲಾಗಿದೆ. ಕೇಂದ್ರ ಸ್ವಯತ್ತ ಸಂಸ್ಥೆಗಳು ರಾಜಕೀಯ ದುರುದ್ದೇಶಕ್ಕಾಗಿ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿವೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ ಹೀಗಾಗಿ ಭದ್ರತೆ ಒದಗಿಸಲಾಗಿದೆ.