ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆಯ ನಿರ್ಮಾಣ- ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ

ಬೆಂಗಳೂರು, ಸೆ.4- ನಾಡಪ್ರಭು ಕೆಂಪೇಗೌಡರ ಇತಿಹಾಸ ಹಾಗೂ ಅವರ ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪ್ರಚಾರ ಪಡಿಸುವ ನಿಟ್ಟಿನಲ್ಲಿ ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಕೆಂಪೇಗೌಡರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಸದಾಶಿವನಗರದ ರಮಣಮಹರ್ಷಿ ಉದ್ಯಾನವನದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ಅವರು, ಈಗಾಗಲೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಡ ಪ್ರಭು ಕೆಂಪೇಗೌಡರ ಹೆಸರನ್ನು ಇಡಲಾಗಿದೆ. ಇದೇ ರೀತಿ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಕೆಂಪೇಗೌಡರ ಬೃಹತ್ ಪ್ರತಿಮೆಯನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಕೆಂಪೇಗೌಡರು ನಿರ್ಮಾಣ ಮಾಡಿದ್ದ 8 ದರ್ಗಾಗಳು, ನಾಲ್ಕು ಗಡಿ ಗೋಪುರಗಳು, ಅವರ ಹುಟ್ಟೂರು ಮಾಗಡಿಯ ಕೆಂಪಾಪುರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರು ನಿರ್ಮಾಣಕ್ಕೆ ಕೆಂಪೇಗೌಡರು ಕೊಟ್ಟ ಕೊಡುಗೆ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಹಲವು ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಕೆಂಪೇಗೌಡರ ಹುಟ್ಟೂರು ಕೆಂಪಾಪುರವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂಬ ಯೋಜನೆ ಇಟ್ಟುಕೊಂಡಿದ್ದೇವೆ. ಅಲ್ಲಿ ಯಾವ ಯಾವ ಅಭಿವೃದ್ಧಿ ಕಾರ್ಯಗಳನ್ನು ಮಾಡಬಹುದು. ಶಾಸನಗಳ ಸಂರಕ್ಷಣೆ, ಗಡಿ, ಗೋಪುರಗಳನ್ನು ರಕ್ಷಿಸುವುದು ಸೇರಿದಂತೆ ಹಲವು ರೀತಿಯ ಕಾರ್ಯಕ್ರಮಗಳನ್ನು ರೂಪಿಸುತ್ತೇವೆ ಎಂದು ತಿಳಿಸಿದರು.

ಕೆಂಪೇಗೌಡರ ದೂರದೃಷ್ಟಿಯಿಂದ ಇಂದು ಬೆಂಗಳೂರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ. ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಿದೆ. ಇಲ್ಲಿನ ಕೆರೆ ಕಟ್ಟೆಗಳನ್ನು ಸಂರಕ್ಷಣೆ ಮಾಡುವುದು, ಉದ್ಯಾನವನಗಳ ಅಭಿವೃದ್ಧಿ, ಪ್ರತಿಯೊಬ್ಬ ನಾಗರಿಕರಿಗೂ ಸುರಕ್ಷತೆ ಒದಗಿಸುವುದು ನಮ್ಮ ಮುಂದಿರುವ ಸವಾಲು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕೆಂಪೇಗೌಡರ ದೂರದೃಷ್ಟಿ ಹೇಗಿತ್ತೆಂದರೆ ನೀರಿನ ಸಮಸ್ಯೆ ನಿವಾರಿಸಲು ಕೆರೆಗಳನ್ನು ನಿರ್ಮಿಸಿದ್ದರು. ಉದ್ಯಾನವನಗಳನ್ನು ನಿರ್ಮಾಣ ಮಾಡುವ ಮೂಲಕ ಬೆಂಗಳೂರಿಗೆ ಉದ್ಯಾನ ನಗರಿ ಎಂಬ ಹೆಸರು ಬರಲು ಕಾರಣರಾದರು. ಇತಿಹಾಸ ಪುಟದಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುವುದು ಪ್ರತಿಯೊಂದು ಸರ್ಕಾರದ ಜವಾಬ್ದಾರಿ ಎಂದು ಅಶ್ವತ್ಥನಾರಾಯಣ ಸಲಹೆ ಮಾಡಿದರು. ಇದಕ್ಕೂ ಮುನ್ನ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಿ.ಎಸ್.ಯಡಿಯೂರಪ್ಪ, ಕೆಂಪೇಗೌಡರ ಕೊಡುಗೆಗಳನ್ನು ಕೊಂಡಾಡಿದರು.

ಬೆಂದಕಾಳೂರಾಗಿದ್ದ ಬೆಂಗಳೂರನ್ನು ಕೆಂಪೇಗೌಡರು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡಯ್ಯಲು ಕಾರಣೀಬೂತರಾದ ಮಹಾಪುರುಷ. ಇಂದು ವಿಶ್ವದ ಮಹಾನಗರಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿರುವುದು ಅತ್ಯಂತ ಪ್ರಶಂಸನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು ಇಂದು ದೇಶದ ಮಹಾನಗರಗಳಾದ ದೆಹಲಿ, ಕೊಲ್ಕತ್ತಾ, ಚೆನ್ನೈ, ಹೈದರಾಬಾದ್ ಸೇರಿದಂತೆ ಮಹಾನಗರಗಳಿಗಿಂತಲೂ ಅತ್ಯಂತ ವೇಗವಾಗಿ ಬೆಳೆದು, ಐಟಿ-ಬಿಟಿ ರಾಜಧಾನಿಯಾಗುವುದರ ಜತೆಗೆ ಉದ್ಯಾನನಗರ ಎಂಬ ಹೆಸರು ಪಡೆದಿದೆ. ಇದಕ್ಕೆಲ್ಲಾ ಕೆಂಪೇಗೌಡರೇ ಮೂಲ ಕಾರಣ. ಅಂತಹ ಮಹಾಪುರುಷನ ಜನ್ಮ ದಿನಾಚರಣೆ ನಡೆಸುವುದು ನನಗೆ ಬಂದಿರುವುದು ನನ್ನ ಸೌಭಾಗ್ಯ, ನನ್ನ ಪೂರ್ವ ಜನ್ಮದ ಪುಣ್ಯ ಎಂದರು.

ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಮುಖ್ಯಮಂತ್ರಿಗಳು ನಿರಾಕರಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ, ಉಪಮೇಯರ್ ಭದ್ರೇಗೌಡ, ನಟರಾದ ಪುನೀತ್‍ರಾಜ್‍ಕುಮಾರ್, ಜಗ್ಗೇಶ್, ಬಿಬಿಎಂಪಿ ಸದಸ್ಯರು ಸೇರಿದಂತೆ ಮತ್ತಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ