ಹೋರಾಟ ನನ್ನ ಜನ್ಮಸಿದ್ದ ಹಕ್ಕು-ಯಾರೂ ಕಸಿಯಲು ಆಗುವುದಿಲ್ಲ- ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಸೆ.4- ರಾಜ್ಯದಲ್ಲಿ ಹಿಂದೆಂದೂ ಕಾಣದಂತಹ ಪ್ರವಾಹ ಉಂಟಾಗಿ ಜನರು ಸಂಕಷ್ಟಕ್ಕೀಡಾಗಿದ್ದು, ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪರಿಹಾರ ದೊರೆಯದಿದ್ದರೆ ದೆಹಲಿಯಲ್ಲೇ ಸಾಂಕೇತಿಕ ಪ್ರತಿಭಟನೆ ಮಾಡುವ ಬಗ್ಗೆ ಚಿಂತನೆ ಮಾಡಲಾಗುವುದು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ದಿ.ಅಟಲ್‍ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ನಾಯಕರ ನಿಯೋಗವನ್ನು ವಿಶೇಷ ರೈಲಿನ ಮೂಲಕ ದೆಹಲಿಗೆ ಕರೆದೊಯ್ದು ಧರಣಿ ನಡೆಸಲಾಗಿತ್ತು. ಈಗ ಯಾವ ರೀತಿಯ ಪರಿಹಾರ ನೀಡಲಿದ್ದಾರೆ ಎಂಬುದನ್ನು ಕಾದು ನೋಡುತ್ತೇವೆ. ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸಲು ತಮ್ಮ ಪ್ರತಿಷ್ಟೆ ಅಡ್ಡಿಯಾಗುವುದಿಲ್ಲ. ಹೋರಾಟ ನನ್ನ ಜನ್ಮಸಿದ್ದ ಹಕ್ಕು. ಅದನ್ನು ಯಾರೂ ಕಸಿಯಲು ಆಗುವುದಿಲ್ಲ ಎಂದರು.

ಸೆ.7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಕಾರ್ಯಕ್ರಮದ ನಿಮಿತ್ತ ಬಂದರೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡುತ್ತಾರೆ. ಆ ಸಂದರ್ಭದಲ್ಲಿ ಮನವಿ ಸಲ್ಲಿಸುವುದಿಲ್ಲ. ಏಕೆಂದರೆ ಈಗಾಗಲೇ ನೆರೆ ಪರಿಹಾರವಾಗಿ ಐದು ಸಾವಿರ ಕೋಟಿ ಪರಿಹಾರ ನೀಡುವಂತೆ ಪ್ರಧಾನಿಯವರಿಗೆ ಮನವಿ ಪತ್ರ ಬರೆಯಲಾಗಿದೆ. ಸುಮಾರು ಒಂದು ತಿಂಗಳಾದರೂ ಅದಕ್ಕೆ ಈವರೆಗೂ ಉತ್ತರ ಬಂದಿಲ್ಲ ಎಂದು ಹೇಳಿದರು.

ಪಕ್ಷ ಸಂಘಟನೆಗೆ ಆರು ತಂಡ:
ಸದ್ಯ ಪ್ರತಿ ಮೂರು ಜಿಲ್ಲೆಗೆ ಒಂದು ತಂಡದಂತೆ ಪಕ್ಷ ಸಂಘಟನೆಗೆ ಆರು ತಂಡವನ್ನು ರಚಿಸಲಾಗುವುದು. ಕೋರ್‍ಕಮಿಟಿ ಸದಸ್ಯರನ್ನೊಳಗೊಂಡ ಈ ತಂಡಗಳು ಪ್ರತಿ ಜಿಲ್ಲೆಗೆ ತೆರಳಿ ಪಕ್ಷ ಸಂಘಟನೆಗೆ ಕ್ರಮ ಕೈಗೊಳ್ಳಲಿವೆ. ಮುಂದಿನ ಒಂದೂವರೆ ತಿಂಗಳೊಳಗೆ ಪಕ್ಷದ ಮಹಿಳಾ ಸಮಾವೇಶ, ಅಲ್ಪಸಂಖ್ಯಾತರ ಸಮಾವೇಶ, ದಲಿತ ಹಾಗೂ ಹಿಂದುಳಿದ ವರ್ಗಗಳ ಸಮಾವೇಶ ನಡೆಸಲಾಗುವುದು ಎಂದು ದೇವೇಗೌಡರು ಇದೇ ವೇಳೆ ತಿಳಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಎಚ್.ಕೆ.ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸೆ.16ರಿಂದ 20ರವರೆಗೆ ಜಿಲ್ಲಾ ಮುಖಂಡರ ಸಭೆಯನ್ನು ನಡೆಸಲು ಉದ್ದೇಶಿಸಲಾಗಿದೆ.

ಸೆ.16ರಂದು ಶಿವಮೊಗ್ಗ, ಚಿಕ್ಕಮಗಳೂರು, ಹಾಸನ. ಸೆ.17ರಂದು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಮುಖಂಡರ ಸಭೆ ಕರೆಯಲಾಗಿದೆ.

ಸೆ.18ರಂದು ರಾಯಚೂರು, ಯಾದಗಿರಿ, ಕಲಬುರ್ಗಿ, ಸೆ.19ರಂದು ವಿಜಯಪುರ, ಬಾಗಲಕೋಟೆ, ಬೆಳಗಾವಿ, ಚಿಕ್ಕೋಡಿ ಹಾಗೂ ಸೆ.2ರಂದು ಹುಬ್ಬಳ್ಳಿ, ಧಾರವಾಡ, ಹಾವೇರಿ ಹಾಗೂ ಗದಗ ಜಿಲ್ಲೆಗಳ ಮುಖಂಡರ ಸಭೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ