ಡಿ.ಕೆ.ಶಿವಕುಮಾರ್ ಬಂಧನ ರಾಜಕೀಯ ಪ್ರೇರಿತ-ಮಾಜಿ ಪಿಎಂ ದೇವೇಗೌಡ

ಬೆಂಗಳೂರು, ಸೆ.4- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದರೂ ನಿಷ್ಕರುಣೆಯಿಂದ ನಡೆದುಕೊಳ್ಳಲಾಗಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಇಂದಿಲ್ಲಿ ಆರೋಪಿಸಿದರು.

ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿಂದು ಸುದ್ದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಬಂಧನ ರಾಜಕೀಯ ಪ್ರೇರಿತ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

ನಾಲ್ಕು ದಿನಗಳ ಕಾಲ ದೆಹಲಿಯಲ್ಲಿ ಇಡಿ ಕಚೇರಿಗೆ ಹಾಜರಾಗಿ ಶಿವಕುಮಾರ್ ವಿಚಾರಣೆಗೆ ಸಹಕರಿಸಿದ್ದಾರೆ. ಅವರು ಕೇಳಿದ ಎಲ್ಲಾ ಪ್ರಶ್ನೆಗೂ ಉತ್ತರಿಸಿದ್ದಾರೆ. ಅಸಹಕಾರ ತೋರಿಲ್ಲ ಎಂದು ಹೇಳಿದರು.

ಗೌರಿ-ಗಣೇಶ ಹಬ್ಬದಂದು ಡಿ.ಕೆ.ಶಿವಕುಮಾರ್ ಅವರ ತಂದೆ ಹಾಗೂ ಅಜ್ಜಿಗೆ ಎಡೆ ಹಾಕುವ ಕಾರ್ಯಕ್ರಮವಿತ್ತು. ಹಿರಿಯ ಮಗನಾಗಿ ಪಿತೃಗಳಿಗೆ ವರ್ಷಕ್ಕೊಮ್ಮೆ ಎಡೆ ಇಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಯಾವುದೇ ಸಬೂಬು ಹೇಳದೆ ವಿಚಾರಣೆಗೆ ಸಹಕರಿಸಿ ಪಿತೃಪಕ್ಷದ ಆಚರಣೆಗೆ ಅವಕಾಶ ಕೇಳಿದ್ದರೂ ಇಡಿ ಅಧಿಕಾರಿಗಳು ಅವಕಾಶ ನೀಡದೇ ಇರುವುದು ಅಮಾನುಷ ನಡವಳಿಕೆಯಾಗಿದ್ದು, ನಮಗೆ ತುಂಬಾ ನೋವುಂಟು ಮಾಡಿದೆ ಎಂದರು.

ಗೌರಿ-ಗಣೇಶ ಹಬ್ಬದ ಹಿಂದಿನ ದಿನ ತಮ್ಮ ಊರಿಗೆ ಬಂದು ಬೆಳಗ್ಗೆ ಪೂಜೆ ಮಾಡಿ ಸಂಜೆ ದೆಹಲಿಗೆ ಹೋಗಬಹುದಿತ್ತು. ಆದರೆ, ಇಡಿ ಅಧಿಕಾರಿಗಳು ಅದಕ್ಕೂ ಅವಕಾಶ ಮಾಡಿಕೊಡದಿರುವ ಘಟನೆ ತಮಗೆ ತೀವ್ರ ತರವಾದ ನೋವು ಉಂಟು ಮಾಡಿದೆ. ನಾಲ್ಕು ದಿನಗಳ ಕಾಲ ನಡೆದ ವಿಚಾರಣೆಯಲ್ಲಿ ಸಮರ್ಪಕ ಉತ್ತರ ಕೊಟ್ಟಿಲ್ಲ. ಕೊಟ್ಟಿರುವ ಉತ್ತರ ಸಮಾಧಾನ ತಂದಿಲ್ಲ. ನಿರೀಕ್ಷೆ ಪ್ರಕಾರ ಕೊಟ್ಟಿಲ್ಲ ಎಂದು ಶಿವಕುಮಾರ್ ಅವರನ್ನು ಬಂಧಿಸಲಾಗಿದೆ. ಅವರಿಗೆ ಎಲ್ಲಾ ರೀತಿಯ ಮಾನಸಿಕ ಒತ್ತಡ ಹಾಕಬೇಕೆಂಬ ಭಾವನೆ ಇರಬಹುದು. ಇಡಿ ತಮ್ಮ ವಶಕ್ಕೆ ಪಡೆದು ಎಲ್ಲಾ ರೀತಿಯ ಒತ್ತಡ ಹಾಕಿ ಉತ್ತರ ಪಡೆಯಬಹುದೆಂಬ ಭಾವನೆ ಇರಬಹುದು. ಈ ಮಾರ್ಗ ಯೋಗ್ಯ ಮಾರ್ಗವಲ್ಲ. ಇದಕ್ಕೆ ತಮ್ಮ ವಿರೋಧವಿದೆ. ರಾಜ್ಯದಲ್ಲಿ ಪಕ್ಷಭೇದ ಮರೆತು ಅವರ ಅಭಿಮಾನಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರತಿಭಟನೆಗೆ ನಮ್ಮ ಪಕ್ಷದ ಕಾರ್ಯಕರ್ತರು ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು.

ಡಿ.ಕೆ.ಶಿವಕುಮಾರ್ ಅವರ ದೆಹಲಿ, ಬೆಂಗಳೂರು, ಕನಕಪುರದ ಮನೆ, ಕಚೇರಿ ಮೇಲೆ ದಾಳಿ ನಡೆದಿದೆ. ವಿಚಾರಣೆಯೂ ನಡೆದಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪತನವಾಗುವ ಸಂದರ್ಭದಲ್ಲಿ ಮುಂದೆ ತಮಗೆ ಕಷ್ಟವಾಗಬಹುದೆಂಬ ಭಾವನೆ ಇದ್ದರೂ ಶಿವಕುಮಾರ್ ಅವರು ಸರ್ಕಾರವನ್ನು ಉಳಿಸಲು ಶ್ರಮಿಸಿದರು. 17 ಮಂದಿ ಆಡಳಿತ ಪಕ್ಷಗಳ ಶಾಸಕರನ್ನು ಮುಂಬೈಗೆ ಕರೆದುಕೊಂಡು ಹೋದಾಗ ಶಿವಕುಮಾರ್ ಕಠೊರವಾಗಿಯೇ ಮಾತನಾಡಿದ್ದರು. ಇದಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂಬ ತೀರ್ಮಾನ ಇರಬಹುದು. ಎರಡು ವರ್ಷ ಇಲ್ಲದ ಬಂಧನ ಈಗೇಕೆ ಎಂದು ದೇವೇಗೌಡರು ಪ್ರಶ್ನಿಸಿದರು.

ಮುಂದೆ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ ಗೌಡರು, ಕೇಂದ್ರ ಸರ್ಕಾರ ತನ್ನ ಅಧೀನದಲ್ಲಿರುವ ಸಂಸ್ಥೆಗಳನ್ನು ಹೇಗೆ ಬಳಸಿಕೊಳ್ಳುತ್ತಿದೆ ಎಂಬ ಹಲವು ನಿದರ್ಶನಗಳನ್ನು ಕೊಡಬಹುದು. ಆ ವಿಚಾರ ಈಗಾಗಲೇ ಜಗತ್ ಜಾಹೀರವಾಗಿದೆ.

ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ. ಅವರ ಬಗ್ಗೆ ಮಾತನಾಡಲು ಬೇಕಾದಷ್ಟು ಕಾಲಾವಕಾಶವಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ಸೇರಿ ತಮ್ಮ ಪುತ್ರ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸರ್ಕಾರ ರಚಿಸಿರಲಿಲ್ಲವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ