ರಾಮನಗರ: ಡಿಕೆ ಶಿವಕುಮಾರ್ ಸ್ವಕ್ಷೇತ್ರ ಕನಕಪುರ ಹೊತ್ತಿ ಉರಿಯುತ್ತಿದೆ. ಡಿಕೆ ಶಿವಕುಮಾರ್ ಬಂಧನ ಖಂಡಿಸಿ ತಾಲೂಕಿನಾದ್ಯಂತ ಭಾರೀ ಪ್ರತಿಭಟನೆ ನಡೆಸಲಾಗುತ್ತಿದೆ.
ಕನಕಪುರ-ಹಾರೋಹಳ್ಳಿಗೆ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್ ಆರ್ ಟಿಸಿ ಬಸ್ ಗೆ ಕಲ್ಲಹಳ್ಳಿಯಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಬೆಂಕಿ ನಂದಿಸಲು ಬಂದ ಅಗ್ನಿಶಾಮಕ ಸಿಬ್ಬಂದಿ ಮೇಲೂ ಕಲ್ಲು ಎಸೆಯಲಾಗಿದೆ.ನಾಲ್ಕೈದು ಬಸ್ ಗಳ ಮೇಲೆ ಕಲ್ಲೆಸೆದು ಹಾನಿ ಮಾಡಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ರಸ್ತೆಗಳಲ್ಲಿ ಟೈರು ಗಳಿಗೆ ಬೆಂಕಿ ಪ್ರತಿಭಟನೆ ನಡೆಸುತ್ತಿದ್ದ ಗುಂಪನ್ನು ಪೊಲೀಸರು ಲಾಠಿಚಾರ್ಚ್ ಮಾಡುವ ಮೂಲಕ ಚದುರಿಸಿದ್ದಾರೆ. ಎಸ್ಪಿ ಎಸ್ ಪಿ ಅನೂಪ್ ಶೆಟ್ಟಿ ಸ್ವತ: ಲಾಠಿ ಹಿಡಿದು ಚಾರ್ಚ್ ಮಾಡಿದ್ದಾರೆ.
ರಾಮನಗರದಲ್ಲಿಯೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಡಿಕೆ ಶಿವಕುಮಾರ್ ಬಂಧನವಾಗುತ್ತಿದ್ದಂತೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಡಿಕೆ ಶಿವಕುಮಾರ್ ಪರ ಅಭಿಮಾನಿಗಳು ಭಾರೀ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬುಧವಾರ ರಾಮನಗರ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದ್ದು, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಮುಖಂಡರು ಹೇಳಿಕೆ ನೀಡಿದ್ದಾರೆ. ಬುಧವಾರವೂ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಮನಗರ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.