ನವದೆಹಲಿ: ಅಕ್ರಮ ಹಣ ಸಾಗಾಟ ಆರೋಪದ ಮೇಲೆ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಸಚಿವ ಡಿ ಕೆ ಶಿಕುಮಾರ್ ಅವರನ್ನು ಇಡಿ ಅಧಿಕಾರಿಗಳು ಮಂಗಳವಾರ ರಾತ್ರಿ ಬಂಧಿಸಿದ್ದು, ದೆಹಲಿಯ ಆರ್ ಎಂಎಲ್ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ದಾಖಲಿಸಿದ್ದಾರೆ.
ಹೈಶುಗರ್ ಮತ್ತು ಲೋ ಬಿಪಿಯಿಂದ ಬಳಲುತ್ತಿರುವ ಡಿ.ಕೆ.ಶಿವಕುಮಾರ್ ಅವರ ರಕ್ತಪರೀಕ್ಷೆಯನ್ನು ವೈದ್ಯಾಧಿಕಾರಿಗಳು ನಡೆಸಿದ್ದಾರೆ. ಎಲ್ಲ ವೈದ್ಯಕೀಯ ಪರೀಕ್ಷೆಗಳ ಬಳಿಕ ಡಿ.ಕೆ.ಶಿವಕುಮಾರ್ ಅವರನ್ನು ಸ್ಪೆಷಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ.
ಡಿಕೆ ಶಿವಕುಮಾರ್ ಅವರನ್ನು ಮೊದಲು ಆರ್ಎಂಎಲ್ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿತ್ತು. ತೀವ್ರ ಬಿಪಿ ಶುಗರ್ ಮತ್ತು ಎದೆ ನೋವಿನಿಂದ ಬಳಲುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಇಂದು ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೊಂದು ಸಲ ಚೆಕಪ್ ಮಾಡಿ, ಆರೋಗ್ಯ ಸ್ಥಿರವಾಗಿದ್ದಲ್ಲಿ ಇಡಿ ಅಧಿಕಾರಿಗಳಿಗೆ ಹಸ್ತಾಂತರಿಸಲಿದ್ದಾರೆ.