ಡಿ.ಕೆ. ಶಿವಕುಮಾರ್ ಬಂಧನ; ಬೆಂಗಳೂರಿನಲ್ಲಿ ತೀವ್ರ ಕಟ್ಟೆಚ್ಚರ 

ಬೆಂಗಳೂರು: ಜಾರಿ ನಿರ್ದೇಶನಾಲಯ ದೆಹಲಿಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಡಿ ಕೆ ಶಿವಕುಮಾರ್ ಬಂಧನ ಹಿನ್ನಲೆಯಲ್ಲಿ ಬೆಂಗಳೂರು ಸುತ್ತಮುತ್ತ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿರುವ ಕಾರಣ ಯಾವುದೇ ಅಹಿತಕರ ಘಟನೆ ನಡೆಯದಂತೆ ಬೆಂಗಳೂರು ನಗರದಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಲಾಗಿದೆ.

ಬೆಂಗಳೂರು ನಗರದ ನಾಲ್ಕೂ ಕಡೆಗಳಲ್ಲಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 10 ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರತಿ ತುಕಡಿಯಲ್ಲಿ 30 ಜನ ಪೊಲೀಸರಿರುತ್ತಾರೆ.

ಎಲ್ಲಾ ಪೊಲೀಸ್ ಅಧಿಕಾರಿಗಳು ಕಳೆದ ರಾತ್ರಿ ನಗರದಾದ್ಯಂತ ಗಸ್ತು ತಿರುಗುತ್ತಿದ್ದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಸಂಸ್ಥೆಗಳಾದ ಐಟಿ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಕಚೇರಿಗಳ ಮುಂದೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಗಣೇಶ ಚತುರ್ಥಿ ಆಚರಣೆ ಹಿನ್ನಲೆಯಲ್ಲಿ ನಗರದಾದ್ಯಂತ ಭದ್ರತೆಯನ್ನು ಈಗಾಗಲೇ ತೀವ್ರಗೊಳಿಸಲಾಗಿತ್ತು. ಇಂದು ನಗರದಲ್ಲಿ ಚುನಾವಣಾ ಸಂಸ್ಥೆಗಳ ನಾಲ್ಕನೇ ಸಾಮಾನ್ಯ ಸಭೆ ಮತ್ತು ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿದೆ. ನಿನ್ನೆ ರಾತ್ರಿ ಶಿವಕುಮಾರ್ ಅವರ ಬಂಧನದ ನಂತರದ ಬೆಳವಣಿಗೆಗಳಿಂದಾಗಿ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಎಂದರು.

ದಕ್ಷಿಣ ಕರ್ನಾಟಕ ಭಾಗದಲ್ಲಿ ಡಿ ಕೆ ಶಿವಕುಮಾರ್ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿರುವುದರಿಂದ ಇಂದು ನಗರದಲ್ಲಿ ಅವರ ಬೆಂಬಲಿಗರು, ಕಾಂಗ್ರೆಸ್ ವತಿಯಿಂದ ತೀವ್ರ ಪ್ರತಿಭಟನೆ ನಡೆಯುವ ಸಾಧ್ಯತೆಯಿದೆ. ಅಲ್ಲದೆ ನಾಡಿದ್ದು ಶನಿವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುತ್ತಿದ್ದಾರೆ. ಈ ಎಲ್ಲಾ ಕಾರಣಗಳಿಂದ ವ್ಯಾಪಕ ಭದ್ರತೆ ಒದಗಿಸಲಾಗುತ್ತಿದೆ ಎಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ