ಬೆಂಗಳೂರು, ಸೆ.4- ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಮಾಡಿ ಸಂಸದರ ಗೆಲುವಿಗೆ ಶ್ರಮಿಸಿರುವ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ದಲಿತ ಮುಖಂಡ ಡಿ.ಎಸ್.ವೀರಯ್ಯ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕೆಂದು ಕರ್ನಾಟಕ ಬಹುಜನ ಸಂಘರ್ಷ ಸಮಿತಿ ಸೇರಿದಂತೆ ಹಲವಾರು ದಲಿತ ಸಂಘಟನೆಗಳು ಆಗ್ರಹಿಸಿವೆ.
ಕಳೆದ 20 ವರ್ಷಗಳ ಹಿಂದೆ ಭಾರತೀಯ ಜನತಾ ಪಕ್ಷವನ್ನು ಸೇರಿ ತಾವೂ ಸೇರಿದಂತೆ ಹಲವಾರು ದಲಿತ ಸಂಘಟನೆಗಳನ್ನು ಬಿಜೆಪಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಈ ವರ್ಗದ ಜನರು ಬಿಜೆಪಿಗೆ ಬೆಂಬಲ ನೀಡುವಂತೆ ಮಾಡಿದ್ದಾರೆ. ಕಳೆದ ಹಲವಾರು ಚುನಾವಣೆಗಳಲ್ಲಿ ಬಿಜೆಪಿಗೆ ಅಧಿಕ ಸ್ಥಾನಗಳನ್ನು ತಂದುಕೊಡುವ ನಿಟ್ಟಿನಲ್ಲಿ ಎಸ್ಸಿ, ಎಸ್ಟಿ ಸಮುದಾಯದವರ ಸಿಂಹಪಾಲು ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಬಹುಜನ ಸಂಘರ್ಷ ಸಮಿತಿ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ತಿಳಿಸಿದ್ದಾರೆ.
ವೀರಯ್ಯ ಅವರು ಬಿಜೆಪಿಯಲ್ಲಿ ನಾಲ್ಕು ಬಾರಿ ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ, ಮಾತೃ ಸಂಸ್ಥೆಯ ಕಾರ್ಯದರ್ಶಿಯಾಗಿ ರಾಷ್ಟ್ರೀಯ ಎಸ್ಸಿ ಮೋರ್ಚಾ ಕಾರ್ಯಕರ್ತರ ಸದಸ್ಯರಾಗಿ, ಪಕ್ಷದ ವಕ್ತಾರರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಎರಡು ಬಾರಿ ವಿಧಾನಪರಿಷತ್ ಸದಸ್ಯರಾಗಿ ಪಕ್ಷದ ಪರವಾಗಿ ದೀನ ದಲಿತರ ದನಿಯಾಗಿ ಅವರು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದ್ದಾರೆ. ಜತೆಗೆ ಬಿ.ಎಸ್.ಯಡಿಯೂರಪ್ಪ ಅವರ ಜತೆ ನಿರಂತರವಾಗಿ ರಾಜ್ಯ ಸುತ್ತಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದಾರೆ.
ಇಂತಹ ನಿಷ್ಠಾವಂತ, ದಲಿತ ಮುಖಂಡ ಡಿ.ಎಸ್.ವೀರಯ್ಯನವರ ನಾಯಕತ್ವವನ್ನು ಬೆಳೆಸಲು ಅವರಿಗೆ ಸೂಕ್ತ ಸ್ಥಾನ ಮಾನ ನೀಡಬೇಕೆಂದು ಅವರು ಬಿಜೆಪಿ ಮುಖಂಡರನ್ನು ಆಗ್ರಹಿಸಿದ್ದಾರೆ.
ಒಂದು ವೇಳೆ ವೀರಯ್ಯ ಅವರನ್ನು ಕಡೆಗಣಿಸಿದರೆ ದಲಿತ ಸಮೂಹವನ್ನು ವಂಚಿಸಿದಂತಾಗುತ್ತದೆ. ಕೂಡಲೇ ಅವರಿಗಾಗಿರುವ ಅನ್ಯಾಯವನ್ನು ಸರಿಪಡಿಸಿ ಸೂಕ್ತ ಸ್ಥಾನಮಾನ ಕಲ್ಪಿಸದಿದ್ದರೆ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಸ್ವಾಮಿ ಮಹಾಮನೆ ಎಚ್ಚರಿಸಿದ್ದಾರೆ.