ಬೆಂಗಳೂರು,ಸೆ.3- ಎರಡನೇ ದರ್ಜೆ ನಗರಗಳಲ್ಲೂ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ ನೀಡಲು ಉದ್ದೇಶಿಸಿರುವ ಹಿನ್ನೆಲೆಯಲ್ಲಿ ಸಮಗ್ರ ಕೈಗಾರಿಕಾ ನೀತಿಯ ಕರಡು ಅಂತಿಮಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಎರಡುಮೂರು ತಿಂಗಳಲ್ಲಿ ಕರಡು ಅಂತಿಮ ರೂಪ ಪಡೆಯಲಿದ್ದು, ಎರಡನೇ ದರ್ಜೆ ನಗರಗಳಲ್ಲೂ ಕೈಗಾರಿಕೆ ಸ್ಥಾಪನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ನೀತಿ ರಚಿಸಲಾಗುತ್ತಿದೆ ಎಂದರು.
ಕೈಗಾರಿಕೆಗಳು ಬೆಂಗಳೂರು ಕೇಂದ್ರಿತವಾಗಿವೆ. ಹಿಂದುಳಿದ ಜಿಲ್ಲೆಗಳಲ್ಲೂ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಕೈಗಾರಿಕಾ ನೀತಿಯಲ್ಲಿ ಈ ಅಂಶಗಳು ನೀತಿ ಗವಾಕ್ಷಿ ಮೂಲಕ ಕೈಗಾರಿಕೆಗಳಿಗೆ ಅನುಮೋದನೆ ನೀಡುವುದು ಹೆಸರಿಗೆ ಮಾತ್ರವಾಗದೆ ಅನುಷ್ಠಾನವಾಗಬೇಕು ಎಂದರು.
ರಾಜ್ಯದಲ್ಲಿ ಕೈಗಾರಿಕಾ ಪರಿಸ್ಥಿತಿ ಚೆನ್ನಾಗಿದೆ. ತೆಲಂಗಾಣದಲ್ಲಿ ಹೆಚ್ಚಿನ ರೀತಿಯಲ್ಲಿ ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಕೈಗಾರಿಕೆ ಸ್ಥಾಪನೆಗೆ ಪಾರದರ್ಶಕ ನೀತಿ ಇರಬೇಕು.ಕಾಸಿಯ, ಎಫ್ಕೆಸಿಸಿಐ ಸೇರಿದಂತೆ ಕೈಗಾರಿಕಾ ಸಂಘಟನೆಗಳೊಂದಿಗೆ ಸಾರ್ವಜನಿಕರ ಅಭಿಪ್ರಾಯವನ್ನೂ ಸಂಗ್ರಹಿಸಿ ಕೈಗಾರಿಕಾ ನೀತಿಯ ಕರಡನ್ನು ಅಂತಿಮಗೊಳಿಸಲಾಗುವುದು ಎಂದು ಹೇಳಿದರು.
ಆರ್ಥಿಕ ಹಿಂಜರಿತ ದೀರ್ಘಾವಧಿಯಲ್ಲಿ ಇರುವುದಿಲ್ಲ. ಈಗಾಗಲೇ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ.ರಾಜ್ಯದಲ್ಲಿ ಆರ್ಥಿಕ ಹಿಂಜರಿತದಿಂದ ಉದ್ಯೋಗ ಕಡಿತವಾಗಿದೆಯೇ ಎಂಬ ಬಗ್ಗೆ ಅಧಿಕಾರಿಗಳಿಂದ ವರದಿ ಪಡೆಯಲಾಗುತ್ತಿದ್ದು, 15 ದಿನದೊಳಗೆ ವರದಿ ಬರಲಿದೆ ಎಂದರು.
ಕೊಪ್ಪಳ, ಬೆಳಗಾವಿ, ತುಮಕೂರು ಸೇರಿದಂತೆ ವಿವಿಧ ಜಿಲ್ಲೆಗಳ ಪ್ರವಾಸ ಕೈಗೊಂಡು ಕೈಗಾರಿಕೆಗಳ ಪರಿಶೀಲನೆ ನಡೆಸಲಾಗುವುದು. ಬಹಳ ಹಿಂದಿನಿಂದಲೂ ಕೈಗಾರಿಕೆಗಳಿಗೆ 2ನೇ ದರ್ಜೆಯ ನಗರಗಳಲ್ಲಿ ಉತ್ತೇಜನ ನೀಡಲು ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕೈಗಾರಿಕಾ ಉದ್ದೇಶಕ್ಕೆ ಭೂಮಿ ಪಡೆದು ಪರಭಾರೆ ಮಾಡಿರುವ ಬಗ್ಗೆ ದೂರುಗಳಿವೆ. ಇಂತಹ ಕಡೆ ಕೈಗಾರಿಕಾ ಭೂಮಿಯನ್ನು ಲೆಕ್ಕ ಪರಿಶೋಧನೆಗೆ ಒಳಪಡಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಾಗತಿಕ ಹೂಡಿಕೆದಾರರ ಸಮಾವೇಶ, ಎರಡು ಮೂರು ತಿಂಗಳು ಹೆಚ್ಚು ಕಡಿಮೆಯಾಗಬಹುದು. ಆದರೆ ಮುಖ್ಯಮಂತ್ರಿಗಳೊಂದಿಗೆ ಸಮಾಲೋಚಿಸಿ ಸಮಾವೇಶ ನಡೆಸುವುದಾಗಿ ತಿಳಿಸಿದರು.