ಸಿಎಂ ಯಡಿಯೂರಪ್ಪನವರಿಂದ ಮಹಾರಾಷ್ಟ್ರ ಸಿಎಂ ಜೊತೆ ಮಹತ್ವದ ಮಾತುಕತೆ

ಮುಂಬೈ,ಸೆ.3- ಉತ್ತರ ಕರ್ನಾಟಕದ ಕೆಲವು ಭಾಗಗಳಿಗೆ ಶಾಶ್ವತ ಕುಡಿಯುವ ನೀರು ಒದಗಿಸುವ ಮಹದಾಯಿ ನದಿ ನೀರು ಯೋಜನೆ ಅನುಷ್ಠಾನಗೊಳಿಸುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಹಾರಾಷ್ಟ್ರ ಸಿಎಂ ಜೊತೆ ಮಹತ್ವದ ಮಾತುಕತೆ ನಡೆಸಿದರು.

ಯೋಜನೆಗೆ ಅಡ್ಡಿಯಾಗಿರುವ ಕಾನೂನು ತೊಡಕುಗಳನ್ನು ಕರ್ನಾಟಕ-ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮುಖ್ಯಸ್ಥರು ಮಾತುಕತೆ ಮೂಲಕವೇ ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳೋಣ. ನ್ಯಾಯಾಧೀಕರಣದಿಂದ ಅಂತಿಮ ಆದೇಶ ಬರುವುದು ವಿಳಂಬವಾಗುವ ಸಾಧ್ಯತೆ ಇದೆ ಎಂದು ಬಿಎಸ್‍ವೈ ಮನವರಿಕೆ ಮಾಡಿಕೊಟ್ಟರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಅಲ್ಲಿನ ನೀರಾವರಿ ಸಚಿವರು, ಅಧಿಕಾರಿಗಳನ್ನು ಇಂದು ಯಡಿಯೂರಪ್ಪ ಭೇಟಿ ಮಾಡಿ ಯೋಜನೆಯ ಅಗತ್ಯತೆ ಹಾಗೂ ಇದರಿಂದಾಗುವ ಅನುಕೂಲಗಳ ಬಗ್ಗೆ ವಿಸ್ತೃತ ವರದಿಯನ್ನು ಸಲ್ಲಿಸಿದರು.

ಯಡಿಯೂರಪ್ಪನವರೊಂದಿಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹಾಗೂ ಕೆಲವು ಇಲಾಖೆ ಅಧಿಕಾರಿಗಳು ತೆರಳಿದ್ದರು.

ಮಹದಾಯಿ ನದಿನೀರು ಯೋಜನೆ ಅನುಷ್ಠಾನಕ್ಕೆ ಗೋವಾ ಸರ್ಕಾರ ಒಂದಿಲ್ಲೊಂದು ಕಾನೂನಿನ ಕ್ಯಾತೆ ತೆಗೆಯುತ್ತಿದೆ. ಇದು ಸಂಪೂರ್ಣವಾಗಿ ಕುಡಿಯುವ ಯೋಜನೆ.

ಉತ್ತರ ಕರ್ನಾಟಕದ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಗದಗ ಸೇರಿದಂತೆ ಕೆಲವು ಭಾಗಗಳಿಗೆ ಶಾಶ್ವತವಾಗಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ.

ಸಮುದ್ರಕ್ಕೆ ಸೇರುವ ಹೆಚ್ಚುವರಿ ನೀರನ್ನು ಯೋಜನೆಗೆ ಬಳಕೆ ಮಾಡಿಕೊಳ್ಳಲಾಗುತ್ತದೆ. ಮಹದಾಯಿ ನದಿಯಿಂದ ಖಾನಾಪುರ ಸಮೀಪ ಇರುವ ಕಳಸಾ ಮತ್ತು ಬಂಡೂರಿ ನಾಲಾ ಮೂಲಕ ಯೋಜನೆಯನ್ನು ಅನುಷ್ಠಾನ ಮಾಡುತ್ತೇವೆ.ಇದು ಕಾರ್ಯಗತವಾಗುವುದರಿಂದ ಮಹದಾಯಿ ನದಿ ನೀರಿನ ಮೂಲಕ್ಕೆ ಯಾವುದೇ ರೀತಿಯ ಧಕ್ಕೆಯಾಗುವುದಿಲ್ಲ.

ಪರಿಸರಕ್ಕೆ ಹಾನಿಯಾಗದಂತೆ ಯೋಜನೆಯನ್ನು ವೈಜ್ಞಾನಿಕವಾಗಿ ಅನುಷ್ಠಾನ ಮಾಡುತ್ತೇವೆ. ಉತ್ತರ ಕರ್ನಾಟಕದಲ್ಲಿ ಬೇಸುಗೆ ಸಮೀಪಿಸುತ್ತಿದ್ದಂತೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಯೋಜನೆ ಅನುಷ್ಠಾನದ ಅಗತ್ಯವಿದೆ ಎಂದು ಫಡ್ನವೀಸ್‍ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ.

ಯೋಜನೆ ಕಾರ್ಯಗತವಾಗುವುದರಿಂದ ಮೂರು ಜಿಲ್ಲೆ, 20ಕ್ಕೂ ಹೆಚ್ಚು ತಾಲ್ಲೂಕುಗಳಿಗೆ ಅನುಕೂಲವಾಗಲಿದೆ. ಅರಬಿ ಸಮುದ್ರಕ್ಕೆ ಸೇರುವ 52.60 ಟಿಎಂಸಿ ನೀರಿನಲ್ಲಿ ನಾವು 7.56 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಮುಂದಾಗಿದ್ದೆವು. ಸದ್ಯ ನ್ಯಾಯಾಧೀಕರಣವು 5.5 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಆದೇಶ ಕೊಟ್ಟಿದೆ.

ಗೋವಾ ಸರ್ಕಾರ ನ್ಯಾಯಾಧೀಕರಣದಿಂದಲೇ ಇತ್ಯರ್ಥವಾಗುವವರೆಗೂ ಯೋಜನೆಯನ್ನು ಅನುಷ್ಠಾನ ಮಾಡಬಾರದೆಂಬ ಪಟ್ಟು ಹಿಡಿದಿದೆ. ಮೂರು ರಾಜ್ಯಗಳ ಮುಖ್ಯಸ್ಥರು ಮಾತುಕತೆ ನಡೆಸಿ ಸಮಸ್ಯೆಯನ್ನು ಪರಿಹರಿಸೋಣ ಎಂದು ಫಡ್ನವೀಸ್‍ಗೆ ಮನವಿ ಮಾಡಿದರು.

ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಫಡ್ನವೀಸ್, ಗೋವಾ ಸರ್ಕಾರ ಮಾತುಕತೆ ನಡೆಸಲು ಉತ್ಸುಕತೆ ತೋರಿದರೆ ನಾವು ಕೂಡ ಸಿದ್ದ ಎಂದು ಹೇಳಿದ್ದಾರೆ.

ಪ್ರತಿ ವರ್ಷ ಮಳೆಗಾಲದಲ್ಲಿ ಕೃಷ್ಣ ನದಿ ನೀರು ಬಿಡುವುದರಿಂದ ಪ್ರವಾಹ ಉಂಟಾಗಿ ಉತ್ತರ ಕರ್ನಾಟಕದ ಅನೇಕ ಕಡೆ ಅತಿವೃಷ್ಟಿ ಉಂಟಾಗುತ್ತದೆ. ಕಳೆದ ತಿಂಗಳು ಪ್ರವಾಹದಿಂದಾಗಿ ಬೆಳಗಾವಿ, ಚಿಕ್ಕೋಡಿ, ಹುಬ್ಬಳ್ಳಿ, ಧಾರವಾಡ, ಗದಗ, ಹಾವೇರಿ, ಬಾಗಲಕೋಟೆ, ವಿಜಾಪುರ ಸೇರಿದಂತೆ ಅನೇಕ ಕಡೆ ಭಾರೀ ಪ್ರವಾಹ ಉಂಟಾಯಿತು.

ಪರಿಣಾಮ ಈ ಭಾಗದಲ್ಲಿ ಸಾವಿರಾರು ಮನೆಗಳು ಉರುಳಿಬಿದ್ದು, ಲಕ್ಷಾಂತರ ಭೂಮಿಯಲ್ಲಿದ್ದ ಬೆಳೆ ಕೊಚ್ಚಿಹೋಗಿದೆ. ಅನೇಕ ಜನರು ಸಾವಿಗೀಡಾಗಿದ್ದು, ಜಾನುವಾರುಗಳು ಸಹ ಅಸುನೀಗಿವೆ.

ಮಹಾರಾಷ್ಟ್ರ ಸರ್ಕಾರ ಇದಕ್ಕೆ ಸಾಧ್ಯವಾದಷ್ಟು ಪರಿಹಾರ ನೀಡುವಂತೆಯೂ ಬಿಎಸ್‍ವೈ ಮನವಿ ಮಾಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ