ಪಾಕಿಸ್ತಾನದಿಂದ ಭಯೋತ್ಪಾದನೆಗೆ ಬಹಿರಂಗ ಪ್ರೋತ್ಸಾಹ-ಸಚಿವ ಎಸ್.ಜೈಶಂಕರ್

ಬ್ರುಸೆಲ್(ಬೆಲ್ಜಿಯಂ), ಸೆ.3-ಪಾಕಿಸ್ತಾನ ಬಹಿರಂಗವಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದ್ದು, ಉಗ್ರಗಾಮಿ ಸಂಘಟನೆಗಳನ್ನು ಹುಟ್ಟು ಹಾಕುವುದು ಮತ್ತು ಅಂತಹ ಬಣಗಳಿಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸುವವರೆಗೆ ಆ ದೇಶದೊಂದಿಗೆ ಸಂಧಾನ ಮಾತುಕತೆಯ ಪ್ರಶ್ನೆಯೇ ಇಲ್ಲ ಎಂದು ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಸ್ಪಷ್ಟಪಡಿಸಿದ್ದಾರೆ.

ಮುದ್ರಣ ಮಾಧ್ಯಮದಲ್ಲಿ ಕಾಶ್ಮೀರದ ಬಗ್ಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬರೆದ ಅಭಿಪ್ರಾಯದ ಬಗ್ಗೆ ಜೈಶಂಕರ್ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಏಷ್ಯಾದ ಮೇಲೆ ಪರಮಾಣುವಿನ ಕರಿನೆರಳು ಬೀಳುತ್ತಿರುವ ಸಂದರ್ಭದಲ್ಲಿ ಕಾಶ್ಮೀರ ವಿವಾದ ಕುರಿತು ಭಾರತದೊಂದಿಗೆ ತುರ್ತು ಮಾತುಕತೆ ನಡೆಸುವ ಅಗತ್ಯವಿದೆ ಎಂದು ಹೇಳಿದರು.

ಅವರು ಬ್ರುಸೆಲ್‍ನಲ್ಲಿ ಪೋಲಿಟಿಕೊಗೆ ನೀಡಿದ ಸಂದರ್ಶನದಲ್ಲಿ, ಇಮ್ರಾನ್ ಖಾನ್ ಅವರು ಬರೆದ ಅಭಿಪ್ರಾಯವನ್ನು ನಾನು ಓದಿಲ್ಲ ಆದರೆ, ಪಾಕಿಸ್ತಾನ ಬಹಿರಂಗವಾಗಿಯೇ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿರುವಾಗ ಅದರೊಂದಿಗೆ ಮಾತುಕತೆ ಆರಂಭ ಸಾಧ್ಯವೇ ಇಲ್ಲ, ಪಾಕಿಸ್ತಾನದ ಒಂದು ಮೂಲೆಯ ಕತ್ತಲೆಯಲ್ಲಿ ಕುಳಿತುಕೊಂಡು ಭಯೋತ್ಪಾದನೆ ಆರಂಭಿಸುವುದಲ್ಲ. ಅದು ಎಲ್ಲರಿಗೂ ಗೊತ್ತಾಗುವಂತೆಯೇ ಬಹಿರಂಗವಾಗಿಯೇ ನಡೆಯುತ್ತಿದೆ ಎಂದು ಟೀಕಿಸಿದರು.

ಗಡಿ ವಿವಾದ ಮತ್ತು ಕಾಶ್ಮೀರ ವಿಚಾರದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳು ಮಾತುಕತೆ ನಡೆಸಿ ಸೌಹಾರ್ದಯುತವಾಗಿ ವಾದ ಬಗೆಹರಿಸಬೇಕೆಂದು ಹಿಂದಿನಿಂದಲೂ ಕೇಳಿಬರುತ್ತಿರುವ ಮಾತಾಗಿದೆ. ಆದರೆ ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ ಎಂದು ಭಾರತ, 2016ರಲ್ಲಿ ಪಠಾಣ್‍ಕೋಟ್‍ನ ವಾಯುನೆಲೆ ಮೇಲೆ ದಾಳಿಯಾದ ಮೇಲೆ ನಿರಾಕರಿಸುತ್ತಲೇ ಬಂದಿದೆ.

ಸಂವಿಧಾನ ವಿಧಿ 370ನ್ನು ರದ್ದುಪಡಿಸಿದ ನಂತರ ಕಾಶ್ಮೀರ ಕಣಿವೆಯಲ್ಲಿ ಹೇರಲಾಗಿದ್ದ ನಿರ್ಬಂಧವನ್ನು ಮುಂದಿನ ದಿನಗಳಲ್ಲಿ ಪರಿಸ್ಥಿತಿ ನೋಡಿಕೊಂಡು ಸಡಿಲಗೊಳಿಸಲಾಗುವುದು ಎಂದು ಜೈಶಂಕರ್ ಹೇಳಿದರು.

ಭಯೋತ್ಪಾದಕರ ಮಧ್ಯೆ ಸಂಪರ್ಕ ಕಡಿತ ಮಾಡಬೇಕಾದರೆ ಮತ್ತು ಹಿಂಸಾಚಾರದಲ್ಲಿ ತೊಡಗಲೆತ್ನಿಸುವ ಜನರ ಮಧ್ಯೆ ಸಂಪರ್ಕ ಕಡಿತ ಮಾಡಲು ಟೆಲಿಪೋನ್, ಇಂಟರ್‍ನೆಟ್ ಮೊದಲಾದ ಸಂಪರ್ಕ ಸಾಧನಗಳನ್ನು ಕಡಿತ ಮಾಡಬೇಕು, ಆದರೆ ಇದರಿಂದ ಸಾಮಾನ್ಯ ಜನತೆಗೆ ತೊಂದರೆಯಾಗುವುದಿಲ್ಲವೇ ಎಂದು ಕೇಳಿದರು.
ಮುಂದಿನ ದಿನಗಳಲ್ಲಿ ಕಾಶ್ಮೀರ ಪರಿಸ್ಥಿತಿ ನೋಡಿಕೊಂಡು ಹಂತಹಂತವಾಗಿ ನಿರ್ಬಂಧಗಳನ್ನು ಸಡಿಲಗೊಳಿಸಲಾಗುವುದು ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ