ಬೆಂಗಳೂರು, ಸೆ.3- ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.ಕೊಡಗಿನಲ್ಲಿ ವರುಣನ ಆರ್ಭಟ ಮತ್ತೆ ಜೋರಾಗಿದೆ.
ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಮತ್ತೆ ಹೆಚ್ಚಾಗಿದ್ದು, ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡುತ್ತಿರುವ ಪರಿಣಾಮ ಕೃಷ್ಣಾ ನದಿಯಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಭಾರೀ ಮಳೆ, ಭೀಕರ ನೆರೆ ಹಾವಳಿಯಿಂದ ತತ್ತರಿಸಿ ಈಗಷ್ಟೆ ಬದುಕು ಕಟ್ಟಿಕೊಳ್ಳುತ್ತಿದ್ದ ಜನತೆ ಮತ್ತಷ್ಟು ಕಂಗಾಲಾಗಿದ್ದಾರೆ.
ಕೊಡಗಿನ ತಲಕಾವೇರಿ, ವಿರಾಜಪೇಟೆ ಮುಂತಾದೆಡೆ ಭಾರೀ ಮಳೆ ಸುರಿಯುತ್ತಿದ್ದು, ಈಗಾಗಲೇ ಆತಂಕದಲ್ಲಿದ್ದ ಜನ ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ, ರಾಯಚೂರು ಮುಂತಾದೆಡೆ ಪ್ರವಾಹದಿಂದ ಮನೆ ಕಳೆದುಕೊಂಡವರು, ಹೊಲ, ಗದ್ದೆ, ಆಸ್ತಿ, ಬೆಳೆ ನಷ್ಟ ಅನುಭವಿಸಿದವರಿಗೆ ಮುಂದೇನು ಎಂಬ ಚಿಂತೆ ಕಾಡುತ್ತಿದೆ.ಪ್ರವಾಹದಲ್ಲಿ ಕೊಚ್ಚಿಹೋದ ಬದುಕನ್ನು ಪುನರ್ ನಿರ್ಮಾಣ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲೇ ಮತ್ತೆ ಪ್ರವಾಹ ಅಪ್ಪಳಿಸುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಕೊಯ್ನಾ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಬಿಡಲಾಗಿತ್ತು.ಇದರ ಪರಿಣಾಮ ಕೃಷ್ಣಾ ನದಿಯಲ್ಲಿ ನೀರು ಹೆಚ್ಚಾಗಿ ಉತ್ತರ ಕರ್ನಾಟಕ ತತ್ತರಿಸಿತ್ತು.ಈಗ ಮಹಾರಾಷ್ಟ್ರದಲ್ಲಿ ಮತ್ತೆ ವರುಣನ ಅಬ್ಬರ ಜೋರಾಗಿದೆ.ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಲಾಗಿದೆ.
ಯಾದಗಿರಿ ಹಾಗೂ ರಾಯಚೂರು ಜಿಲ್ಲೆ ಮಧ್ಯೆ ಇರುವ ಬಸವ ಸಾಗರ ಜಲಾಶಯ ಭರ್ತಿಯಾಗಿದೆ.ಈ ಅಣೆಕಟ್ಟಿನಿಂದ 34 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.
ಕಳೆದೆರಡು ವಾರಗಳ ಹಿಂದಷ್ಟೆ ನೆರೆ ತಗ್ಗಿತ್ತು.ಭಾರೀ ಪ್ರವಾಹದಿಂದಾಗಿ ರಾಯಚೂರು ಜಿಲ್ಲೆಯ 30ಕ್ಕೂ ಹೆಚ್ಚು ಗ್ರಾಮಗಳನ್ನು ಸ್ಥಳಾಂತರಿಸಲಾಗಿತ್ತು.16,156 ಹೆಕ್ಟೇರ್ ಕೃಷಿ ಭೂಮಿಯ ಬೆಳೆ ನಾಶವಾಗಿತ್ತು.ಈಗ ಮತ್ತೆ ನದಿಯಲ್ಲಿ ನೀರು ಹೆಚ್ಚುತ್ತಿರುವುದರಿಂದ ಸಂಕಷ್ಟಕ್ಕೀಡಾಗುವ ಭೀತಿ ಎದುರಾಗಿದೆ.
ಬಸವ ಸಾಗರ ಜಲಾಶಯದಿಂದ ನೀರಿನ ಹರಿವು ಹೆಚ್ಚಿರುವ ಕಾರಣದಿಂದ ನದಿ ತೀರಕ್ಕೆ ತೆರಳದಂತೆ ಸ್ಥಳೀಯರಿಗೆ ಎಚ್ಚರಿಕೆ ನೀಡಲಾಗಿದೆ.
ಬೆಳಗಾವಿ ಜಿಲ್ಲೆಯ ಹಲವೆಡೆ ಕೂಡ ಪ್ರವಾಹದ ಭೀತಿ ಎದುರಾಗಿದೆ. ಕೃಷ್ಣಾ ನದಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಚಿಕ್ಕೋಡಿ ತಾಲ್ಲೂಕು ಕಲ್ಲೋಳು, ಯಡಿಯೂರು ಸೇತುವೆ ಮುಳುಗಿವೆ. ಸುತ್ತಮುತ್ತಲ ಗ್ರಾಮಸ್ಥರಿಗೆ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ.
ಇತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿದ್ದು, ಪಶ್ಚಿಮ ಘಟ್ಟದ ನದಿಗಳು ಉಕ್ಕಿ ಹರಿಯುತ್ತಿವೆ.