ನವದೆಹಲಿ/ಬೆಂಗಳೂರು, ಸೆ.3- ಭೂಮಿಯ ಸ್ವಾಭಾವಿಕ ಗ್ರಹ ಚಂದಿರನ ರಹಸ್ಯ ಕುತೂಹಲಗಳನ್ನು ಪತ್ತೆ ಮಾಡಲು ಅಭಿಯಾನ ಕೈಗೊಂಡಿರುವ ಭಾರತದ ಮಹಾತ್ವಾಕಾಂಕ್ಷಿಯ ಚಂದ್ರಯಾನ -2 ನೌಕೆ ಮತ್ತೊಂದು ಜಟಿಲ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತಿಳಿಸಿದೆ.
ಚಂದ್ರಯಾನ-2ನ ಮತ್ತೊಂದು ಹಂತ ಸಫಲವಾಗಿದ್ದು, ಮೊದಲ ಹಂತದ ಮೂನ್ ಲ್ಯಾಂಡರ್ ಡಿ-ಆರ್ಬಿಟ್ ಮೆನೋವರ್ ಪ್ರಕ್ರಿಯೆಯನ್ನು ವಿಜ್ಞಾನಿಗಳು ಇಂದು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ನಿನ್ನೆಯಷ್ಟೇ ಚಂದ್ರಯಾನ 2 ಆರ್ಬಿಟರ್ನಿಂದ ವಿಕ್ರಮ್ ಲ್ಯಾಂಡರ್ಅನ್ನು ಯಶಸ್ವಿಯಾಗಿ ಬೇರ್ಪಡಿಸಿದ್ದ ವಿಜ್ಞಾನಿಗಳು , ಇದೀಗ ಚಂದ್ರನ ಮೇಲ್ಮನತ್ತ ಮೂನ್ ಲ್ಯಾಂಡರ್ ಅನ್ನು ನಿಖರವಾಗಿ ಸೇರಿಸುವ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಇಂದು ಬೆಳಗ್ಗೆ 8.50ರ ಸುಮಾರಿನಲ್ಲಿ ವಿಜ್ಞಾನಿಗಳು ಚಂದ್ರನ ಮೇಲ್ಮನತ್ತ ಮೂನ್ ಲ್ಯಾಂಡರ್ ಅನ್ನು ತಳ್ಳುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಮೂನ್ ಲ್ಯಾಂಡರ್ನ ಎಂಜಿನ್ ಅನ್ನು ಸುಮಾರು 4 ಸೆಕೆಂಡ್ಗಳ ಕಾಲ ಚಾಲನೆ ನೀಡಲಾಯಿತೆಂದು ಇಸ್ರೋ ಟ್ವಿಟರ್ನಲ್ಲಿ ತಿಳಿಸಿದೆ.
ಮೂನ್ ಲ್ಯಾಂಡರ್ ಚಂದ್ರನ ಮೇಲ್ಮೈನ 109-120 ಕಿ.ಮೀ ವ್ಯಾಪ್ತಿಯೊಳಗೆ ತಳ್ಳಲ್ಪಟ್ಟಿದೆ. ಇದು ಮೊದಲ ಹಂತದ ಪ್ರಕ್ರಿಯೆಯಾಗಿದ್ದು, ನಾಳೆ ನಡೆಯಲಿರುವ 2ನೇ ಹಂತದ ಕಾರ್ಯಾಚರಣೆಯಲ್ಲಿ ಮತ್ತೆ ಮೂನ್ ಲ್ಯಾಂಡರ್ ಎಂಜಿನ್ಅನ್ನು ಚಾಲನೆ ಮಾಡುವ ಮೂಲಕ 39-110ಕಿ.ಮೀ ವ್ಯಾಪ್ತಿಯೊಳಗೆ ತಳ್ಳಲಾಗುತ್ತದೆ.
ಇದು ತೀರಾ ಸೂಕ್ಷ್ಮ ಕಾರ್ಯಾಚರಣೆಯಾಗಿದ್ದು, ಚಂದ್ರನ ದಕ್ಷಿಣ ತುದಿಯಲ್ಲಿ ಮೂನ್ ಲ್ಯಾಂಡರ್ ಮತ್ತು ರೋವರ್ ಅನ್ನು ಇಳಿಸುವ ಕಾರ್ಯಾಚರಣೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.