ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ-ಸಚಿವ ವಿ.ಸೋಮಣ್ಣ

ಬೆಂಗಳೂರು, ಸೆ.3-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ನೇತೃತ್ವದಲ್ಲಿ ಉಳಿದಿರುವ ಅವಧಿಯನ್ನು ಯಶಸ್ವಿಯಾಗಿ ನಿಭಾಯಿಸಲಿದ್ದೇವೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಬರಲಿದೆ ಎಂಬ ಹಗಲುಗನಸನ್ನು ವಿರೋಧಪಕ್ಷಗಳು ಕಾಣುವುದು ಬೇಡ ಎಂದು ವಸತಿ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ. ಅದರಂತೆ ಯಡಿಯೂರಪ್ಪ ಸೇರಿದಂತೆ ಸಂಪುಟದ ಸಹೋದ್ಯೋಗಿಗಳು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆದರೆ ಪ್ರತಿಪಕ್ಷದವರು ಮಧ್ಯಂತರ ಚುನಾವಣೆಯ ಗುಂಗಿನಲ್ಲಿದ್ದಾರೆ ಎಂದು ಟೀಕಿಸಿದರು.

ಯಾವುದೇ ಕಾರಣಕ್ಕೂ ಮಧ್ಯಂತರ ಚುನಾವಣೆ ಬರುವುದಿಲ್ಲ. ಉಳಿದಿರುವ ಮೂರು ವರ್ಷ, 9 ತಿಂಗಳು ನಮ್ಮ ಪಕ್ಷವೇ ಅಧಿಕಾರದಲ್ಲಿರುತ್ತದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಯಾವ ಅರ್ಥದಲ್ಲಿ ಚುನಾವಣೆ ಬರುತ್ತದೆ ಎಂದು ಹೇಳಿದ್ದಾರೋ ಗೊತ್ತಿಲ್ಲ. ಅವರಿಗೆ ಒಂದೊಂದು ಕ್ಷಣ, ಒಂದೊಂದು ರೀತಿ ದೃಷ್ಟಿಕೋನ ಇರುತ್ತದೆ ಎಂದು ಲೇವಡಿ ಮಾಡಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಬರಗಾಲ ಹೋಗಿ ಸಾಕಷ್ಟು ಮಳೆಯಾಗುತ್ತದೆ ಎಂಬ ಪ್ರತೀತಿ ಇದೆ. ಈ ಬಾರಿ ನಿರೀಕ್ಷೆಗೂ ಮೀರಿದ ಮಳೆಯಾಗಿದ್ದು, ಹಳ್ಳಕೊಳ್ಳಗಳು, ಜಲಾಶಯಗಳು ಭರ್ತಿಯಾಗಿವೆ. ಇನ್ನೊಂದು ವಾರದಲ್ಲಿ ಜಲಾಶಯಗಳು ಸಂಪೂರ್ಣ ಭರ್ತಿಯಾಗಲಿವೆ. ಜನರೂ ಕೂಡ ನೆಮ್ಮದಿಯಾಗಿ ಇದ್ದಾರೆ.

ಸರ್ಕಾರ ಈಗಾಗಲೇ ಪ್ರವಾಹಪೀಡಿತ ಸ್ಥಳಗಳಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಂಡಿದೆ.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೇ ಪ್ರವಾಸ ಮಾಡಿ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ದಾರೆ. ರಾಜ್ಯ ಸರ್ಕಾರ ಅಗತ್ಯವಿರುವ ಕಡೆ ಹಣ ಬಿಡುಗಡೆ ಮಾಡಿದೆ. ಸಂತ್ರಸ್ತರಿಗೆ ಮನೆ ನಿರ್ಮಾಣ, ಗಂಜಿಕೇಂದ್ರಗಳ ತೆರೆಯುವಿಕೆ, ಮನೆಗಳ ದುರಸ್ತಿ, ಜಾನುವಾರುಗಳ ರಕ್ಷಣೆ ಸೇರಿದಂತೆ ನಾನಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಿದ್ದೇವೆ ಎಂದರು.

ಕೇಂದ್ರದಿಂದ ನಮಗೆ ಹೆಚ್ಚಿನ ನೆರವು ಸಿಗುವ ಸಂಭವವಿದೆ.ಅಧಿಕಾರಿಗಳು ವರದಿ ನೀಡಿದ ಬಳಿಕ ಕೇಂದ್ರದಿಂದ ಆರ್ಥಿಕ ನೆರವು ಘೋಷಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ