ಕಲಬುರಗಿ, ಸೆ.3-ಕರ್ನಾಟಕದಲ್ಲಿ ಮಾತ್ರವಲ್ಲ ಉತ್ತರ ಪ್ರದೇಶ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ದೆಹಲಿ ಸೇರಿದಂತೆ ವಿವಿಧ ಕಡೆ ಬಿಜೆಪಿಯೇತರ ನಾಯಕರುಗಳನ್ನು ಬ್ಲಾಕ್ಮೇಲ್ ಮಾಡಲು ಭಾರತೀಯ ಜನತಾ ಪಕ್ಷ ಸಿಬಿಐ, ಐಟಿ, ಇಡಿ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ತಪ್ಪಿತಸ್ಥರು ಎಂದು ಎಲ್ಲಿಯೂ ಕಂಡುಬಂದಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ಥಿರಗೊಳ್ಳುತ್ತಿದೆ.ಹೀಗಾಗಿ ವಿರೋಧ ಪಕ್ಷಗಳನ್ನು ನಿಯಂತ್ರಣದಲ್ಲಿಡಬೇಕೆಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸಂವಿಧಾನಿಕ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.ಈ ಮೂಲಕ ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೊಲೆ ಆರೋಪಿ ಪರ ಹೇಳಿಕೆ ಆಧಾರದ ಮೇಲೆ ಚಾರ್ಜ್ ಶೀಟ್ ಇಲ್ಲದೆಯೇ ರಾತ್ರೋರಾತ್ರಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿದರು ಎಂದು ದೂರಿದ ಪ್ರಿಯಾಂಕ್ ಖರ್ಗೆ ಅವರು, ಈ ರಾಜಕೀಯ ಹುನ್ನಾರಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಸಿದರು.
ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿ ಇಲ್ಲ. ದಿನೇಶ್ಗುಂಡೂರಾವ್ ಅವರು ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.ಅಧ್ಯಕ್ಷರ ಬದಲಾವಣೆ ಬಗ್ಗೆ ಹೈಕಮಾಂಡ್ ಯಾವುದೇ ಸೂಚನೆ ನೀಡಿಲ್ಲ. ಇವೆಲ್ಲ ಕೇವಲ ಮಾಧ್ಯಮಗಳ ವದಂತಿ ಅವರು ಸ್ಪಷ್ಟಪಡಿಸಿದರು.