ಒಎನ್‍ಜಿಸಿ ಘಟಕದಲ್ಲಿ ಭೀಕರ ಬೆಂಕಿ ಅವಘಡ-ಘಟನೆಯಲ್ಲಿ ಐವರು ಕಾರ್ಮಿಕರ ಸಾವು

ಮುಂಬೈ, ಸೆ.3- ವಾಣಿಜ್ಯ ನಗರಿ ಮುಂಬೈನಲ್ಲಿ ಅಗ್ನಿ ದುರಂತಗಳ ಸರಣಿ ಮುಂದುವರೆದಿದೆ.

ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ನಿಯಮಿತ (ಒಎನ್‍ಜಿಸಿ) ಘಟಕದಲ್ಲಿ ಇಂದು ಮುಂಜಾನೆ ಭೀಕರ ಬೆಂಕಿ ಅವಘಡ ಸಂಭವಿಸಿದ್ದು, ಈ ದುರ್ಘಟನೆಘಟನೆಯಲ್ಲಿ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ.

ಗಾಯಗೊಂಡ ಎಂಟು ಕಾರ್ಮಿಕರಲ್ಲಿ ಮೂವರ ಸ್ಥಿತಿ ಅತ್ಯಂತ ಶೋಚನೀಯವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಾಗಿದೆ.

ನವಿಮುಂಬೈನ ಊರಾನಲ್ಲಿರುವ ಒಎನ್‍ಜಿಸಿ ತೈಲ ಸಂಸ್ಕರಣಾ ಘಟಕದ ಮಳೆ ನೀರು ಕಾಲುವೆಯಲ್ಲಿ (ಶೀಥಲಘದಲ್ಲಿ) ಬೆಂಕಿ ಅನಾಹುತ ಸಂಭವಿಸಿದ್ದು, ಐವರು ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಉನ್ನತ್ತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಳ್ಳುತಿದ್ದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಘಟಕದಲ್ಲಿದ್ದ ಅನಿಲವನ್ನು ಗುಜರಾತ್‍ನ ಹಜೀರಾ ಘಟಕಕ್ಕೆ ಕ್ಷಿಪ್ರವಾಗಿ ಕೊಳವೆ ಮಾರ್ಗದ ಮೂಲಕವಾಗಿ ಹಾಯಿಸಲಾಯಿತು. ಇದರಿಂದ ಸಂಭವಿಸಬಹುದಾಗಿದ್ದ ಮತ್ತಷ್ಟ ಬೆಂಕಿ ಮತ್ತು ಸ್ಫೋಟ ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವಘಡಕ್ಕೆ ಪ್ರಮುಖ ಕಾರಣ ತಿಳಿದುಬಂದಿಲ್ಲ. ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳದ ವಾಹನ ಹಾಗೂ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಗ್ನಿ ಅವಘಡದಲ್ಲಿ ಕೆಲ ಸಿಬ್ಬಂದಿಗಳಿಗೂ ಕೂಡ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅಗ್ನಿ ಅವಘಡವನ್ನು ಖಚಿತಪಡಿಸಿರುವ ಒಎನ್‍ಜಿಸಿ ಅಧಿಕಾರಿಗಳು, ಸಂಸ್ಕರಣಾ ಘಟಕದಲ್ಲಿ ಇಂದು ಬೆಳಿಗ್ಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳಕ್ಕೆ ಈಗಾಗಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದೆ. ಈಗಾಗಲೇ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ತೈಲ ಸಂಸ್ಕರಣೆ ಕಾರ್ಯ ಅಬಾತವಾಗಿ ಮುಂದುವರೆದಿದೆ. ಅನಿಲ ಸಾಗಣೆಯ ಮಾರ್ಗವನ್ನು ಹಜೀರಾ ಘಟಕದತ್ತೆ ಬದಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ಮತ್ತು ಗಾಯಾಳುಗಳ ಚಿಕಿತ್ಸೆಗೆ ನೆರವು ನೀಡುವಂತೆ ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ