ಅಮೆರಿಕ ನಿರ್ಮಿತ 8 ಅಪಾಚೆ ಯುದ್ಧವಿಮಾನಗಳನ್ನು ವಾಯುಪಡೆ ಸೇವೆಗೆ ಸೇರ್ಪಡೆ: ವಾಯುಪಡೆ ಮುಖ್ಯಸ್ಥ ​ ಬಿ.ಎಸ್​. ಧನೋವಾ

ನವದೆಹಲಿ: ಭಾರತೀಯ ವಾಯುಪಡೆ ಅಮೆರಿಕ ನಿರ್ಮಿತ 8 ಅಪಾಚೆ ಎಎಚ್​-64ಇ ಯುದ್ಧಹೆಲಿಕಾಪ್ಟರ್​ಗಳನ್ನು ತನ್ನ ಸೇವೆಗೆ ಸೇರ್ಪಡೆಗೊಳಿಸಿಕೊಂಡಿತು.

ಪಠಾನ್​ಕೋಟ್​ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೋವಾ ಹೆಲಿಕಾಪ್ಟರ್​ಗಳನ್ನು ಬರಮಾಡಿಕೊಂಡರು.

ಸಂಪ್ರದಾಯಬದ್ಧವಾಗಿ 8 ಯುದ್ಧಹೆಲಿಕಾಪ್ಟರ್​ಗಳನ್ನು ವಾಯುಪಡೆ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ಒಟ್ಟು 22 ಅಪಾಚೆ ಯುದ್ಧಹೆಲಿಕಾಪ್ಟರ್​ಗಳನ್ನು ಖರೀದಿಸಲಾಗುತ್ತಿದೆ. ಇನ್ನುಳಿದ ಹೆಲಿಕಾಪ್ಟರ್​ಗಳು ಕಂತಿನಲ್ಲಿ ಬರಲಿದ್ದು, ಹಂತಹಂತವಾಗಿ ಅವನ್ನು ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗುವುದು. ವಾಯುಪಡೆ ಹಿಂದೆಯೂ ಯುದ್ಧಹೆಲಿಕಾಪ್ಟರ್​ಗಳನ್ನು ಹೊಂದಿತ್ತು. ಆದರೆ, ಅಪಾಚೆ ಯುದ್ಧಹೆಲಿಕಾಪ್ಟರ್​ಗಳು ಹೆಚ್ಚಿನ ನಿಖರತೆಯೊಂದಿಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿವೆ ಎಂದು ವಾಯಪಡೆಯ ವಕ್ತಾರ ಅನುಪಮ್​ ಬ್ಯಾನರ್ಜಿ ತಿಳಿಸಿದರು.

ಎಎಚ್​-64ಇ ಯುದ್ಧಹೆಲಿಕಾಪ್ಟರ್​ಗಳು ವಿಶ್ವದಲ್ಲಿ ಸದ್ಯ ಲಭ್ಯ ಇರುವ ಅತ್ಯಾಧುನಿಕ ಯುದ್ಧಹೆಲಿಕಾಪ್ಟರ್​ಗಳಾಗಿವೆ. ಇವನ್ನು ಅಮೆರಿಕ ತನ್ನ ವಾಯುಸೇನಾಪಡೆಯ ಸೇವೆಗೆ ಬಳಸುತ್ತಿದೆ. ಇಂಥ 22 ಯುದ್ಧಹೆಲಿಕಾಪ್ಟರ್​ಗಳನ್ನು ಭಾರತ ಅಮೆರಿಕದಿಂದ ಖರೀದಿಸುತ್ತಿದೆ. ಜು.27ರಂದು ಮೊದಲ ಕಂತಿನಲ್ಲಿ ಬಂದಿದ್ದ 4 ಅಪಾಚೆ ಯುದ್ಧಹೆಲಿಕಾಪ್ಟರ್​ಗಳನ್ನು ಭಾರತೀಯ ವಾಯುಪಡೆಯ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ