ಮೈಸೂರು, ಸೆ.1- ಮಾಜಿ ಶಾಸಕ ಎಂ.ಟಿ.ಬಿ.ನಾಗರಾಜ್ ವಿರುದ್ಧ ತಿರುಗಿ ಬಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನನ್ನ ಜತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಟಿ.ಬಿ.ನಾಗರಾಜ್ ಅವರ ಟೀಕೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದ ಸಿದ್ದರಾಮಯ್ಯ, ಒಂದು ಸಾರಿ ನಾನು ಅವರ ಹೃದಯದಲ್ಲಿ ಇದ್ದೀನಿ ಅಂತಾನೆ…. ಆ ಮೇಲೆ ನನ್ನನ್ನೇ ಟೀಕೆ ಮಾಡ್ತಾನೆ. ನನ್ನ ಜತೆಯಲ್ಲೇ ಇದ್ದು ನನಗೆ ದ್ರೋಹ ಮಾಡಿದ್ದಾನೆ. ಹಾಗಾಗಿ ಅವರ ನಾಟಕಗಳಿಗೆ ಜನರೇ ಉತ್ತರ ಕೊಡ್ತಾರೆ ಎಂದರು.
ರಾಜಕಾರಣದಲ್ಲಿ ಯಾರನ್ನು ನಂಬಬೇಕು ಎಂಬುದೇ ಗೊತ್ತಾಗುತ್ತಿಲ್ಲ. ನಾನೇ ಟಿಕೇಟ್ ಕೊಟ್ಟವರು ಶಾಸಕರಾದರು. ನಂತರ ನನ್ನ ವಿರುದ್ಧ ನಿಲ್ಲುತ್ತಾರೆ. ಹಾಗಾಗಿ ರಾಜಕೀಯದಲ್ಲಿ ನಂಬಿಕೆ ಎನ್ನುವ ಪದಕ್ಕೆ ಅರ್ಥವಿಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿಚಾರಣೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಕಾಂಗ್ರೆಸ್ ನಾಯಕರನ್ನು ಟಾರ್ಗೆಟ್ ಮಾಡುತ್ತಿವೆ. ಕಾನೂನು ಎಂದರೆ ಎಲ್ಲರಿಗೂ ಒಂದೇ ಅಲ್ವ ಎಂದು ಪ್ರಶ್ನಿಸಿದರು.
ಸದನದಲ್ಲಿ ಆಪರೇಷನ್ ಕಮಲದ ಬಗ್ಗೆ ಶಾಸಕರೇ ಪ್ರಸ್ತಾಪ ಮಾಡಿದ್ದಾರೆ.ಅವರ ವಿರುದ್ಧ ಏಕೆ ತನಿಖೆ ಮಾಡುತ್ತಿಲ್ಲ ಎಂದು ಕೇಳಿದರು.
ಬಿಜೆಪಿ ಸರ್ಕಾರ ಇಷ್ಟು ದಿನಗಳಾದರೂ ಟೇಕಾಫ್ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಆರೋಪಿಸಿದ್ದಾರೆ.
ಡಿಸೆಂಬರ್ನಲ್ಲಿ ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ಬರಲಿದೆ ಎಂದು ಭವಿಷ್ಯ ನುಡಿದ ಸಿದ್ದರಾಮಯ್ಯ.ಈಗಾಗಲೇ ಬೈ ಎಲೆಕ್ಷನ್ಗೆ ಸಿದ್ದವಾಗಿದ್ದೇವೆ. ಜತಗೆ ಮಧ್ಯಂತರ ಚುನಾವಣೆ ತಯಾರಾಗಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಯಾಕೆಂದರೆ ಈ ಸರ್ಕಾರ ನೋಡಿದರೆ ಅಧಿಕಾರ ನಡೆಸುತ್ತಾರೆ ಎಂದು ಅನ್ನಿಸತ್ತಿಲ್ಲ ಎಂದರು.
ಕಾಂಗ್ರೆಸ್ ನಾಯಕರನ್ನು ರಾಜಕೀಯವಾಗಿ ಮುಗಿಸಲು ಇಡಿ ಬಳಕೆಯಾಗುತ್ತಿದೆ.ಶ್ರೀನಿವಾಸಗೌಡ ಓಪನ್ಆಗಿ ನನಗೆ 5 ಕೋಟಿ ಕೊಡಲು ಬಂದಿದ್ರು ಎಂದಿದ್ದರು.ಅಲ್ಲಿವೆ ವಿಶ್ವನಾಥ್, ಯೋಗೇಶ್ವರ್, ಅಶ್ವತ್ಥನಾರಾಯಣ್ ವಿರುದ್ಧ ಸಿದ್ದರಾಮಯ್ಯ ಟೀಕೆ ಮಾಡಿ ಇವರ ಬಗ್ಗೆ ಯಾಕೆ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತಮ್ಮ ಸಮೀಪದಲ್ಲಿದ್ದ ಮಾಜಿ ಸಚಿವ ಮಹದೇವಪ್ಪ ನನ್ನ ನೋಡಿದ ಸಿದ್ದರಾಮಯ್ಯ ಏನು ಮಹದೇವಪ್ಪ ಹುಡುಗನ ಥರಾ ಆಗ್ತೀದೀಯಾ ಎಂದು ಪ್ರಶ್ನಿಸಿದಲ್ಲದೆ, ನನಗೆ ವಯಸ್ಸಾಯಿತು, ನೀನು ಹುಡುಗನ ಥರ ಆಗ್ತಿದೀಯ ಎಂದು ನಗೆ ಚಟಾಕಿ ಹಾರಿಸಿದರು.
ಸಿದ್ದರಾಮಯ್ಯನ ಹುಂಡಿ ವಾಸಿ ಕರೀಗೌಡ ದೂರದಲ್ಲಿ ನಿಂತಿದ್ದರು.ಅವರ ಗುರುತು ಹಿಡಿದು ಕರೀಗೌಡ ಯಾಕಪ್ಪ ಅಲ್ಲಿ ನಿಂತಿದ್ದೀಯಾ ಬಾರೋ ಇಲ್ಲಿ ಎಂದಾಗ ನನಗೆ ಹುಷಾರಿಲ್ಲ ನಿಮ್ಮತ್ರ ನೆರವು ಕೇಳಲು ಬಂದೆ ಎಂದಾಗ ಆತನಿಗೆ ಎರಡು ಸಾವಿರರೂ. ನೀಡಿ ಆರೋಗ್ಯ ಚೆನ್ನಾಗಿ ನೋಡಿಕೋ ಎಂದು ಹೇಳಿದರು.
ಕೆಲವು ಕಡೆ ಸಂತ್ರಸ್ತರಿಗೆ ಕೇವಲ ಹತ್ತು ಸಾವಿರ ಕೊಟ್ಟಿದ್ದಾರೆ. ಮತ್ತೆ ಕೆಲವೆಡೆ ಕೊಟ್ಟಿಲ್ಲ. ಸಂತ್ರಸ್ತರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿ, ಸಂತ್ರಸ್ತರಿಗೆ ಕನಿಷ್ಠ ಒಂದು ಲಕ್ಷ ನೀಡಬೇಕೆಂದು ಒತ್ತಾಯಿಸಿದರು.
ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮುಂದುವರೆಯುವ ಬಗ್ಗೆ ಹೈಕಮಾಂಡ್ ನೇಮಿಸಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.