ಬೆಂಗಳೂರು,ಆ.31-ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಸದ್ಯದಲ್ಲೇ ನೀಲಿ ನಕ್ಷೆ ಸಿದ್ಧಪಡಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದರು.
ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಗೂ ಬೆಂಗಳೂರು ನಗರದ ಗಣ್ಯರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಸರಿಯಾದ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸಮಗ್ರ ನೀಲಿನಕ್ಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಬೆಂಗಳೂರು ಎದುರಿಸುತ್ತಿರುವ ಸಂಚಾರ ದಟ್ಟಣೆ, ರಸ್ತೆ, ಪರಿಸರ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಗಣ್ಯರು ಬೆಳಕು ಚೆಲ್ಲಿದ್ದಾರೆ.ಸಮಸ್ಯೆಗಳಿಗೆ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಲಹೆಗಳನ್ನು ನೀಡಿದ್ದು, ಶೀಘ್ರ ಅನುಷ್ಠಾನವಾಗಬೇಕು ಎಂಬ ಸಲಹೆ ವ್ಯಕ್ತವಾಗಿದೆ.ಮುಂದಿನ ದಿನಗಳಲ್ಲಿ ವಸತಿ ಗೃಹಗಳ ಪ್ರತಿನಿಧಿಗಳು, ಬಡಾವಣೆ, ನಿವಾಸಿಗಳ ಸಂಘಟನೆಗಳು ಹಾಗೂ ಐಟಿ-ಬಿಟಿ ಉದ್ಯಮಿಗಳೊಂದಿಗೂ ಸಂವಾದ ನಡೆಸಿ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಇಂದಿನ ಸಭೆಯಲ್ಲಿ ನಗರಾಭಿವೃದ್ಧಿ, ಬಿಡಿಎ, ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ, ಬಿಎಂಆರ್ಸಿಎಲ್ ಅಧಿಕಾರಿಗಳು, ಬೆಂಗಳೂರು ನಗರ ಪೆÇಲೀಸ್ ಆಯುಕ್ತರೂ ಪಾಲ್ಗೊಂಡಿದ್ದರು.
ಬೆಂಗಳೂರು ಸಂಚಾರ ದಟ್ಟಣೆ ಹಾಗೂ ರಸ್ತೆ ಸುಧಾರಣೆ ಬಗ್ಗೆ ಪ್ರಸ್ತಾಪವಾಗಿದ್ದು, ಫೆರಿಪೆರಲ್ ರಿಂಗ್ ರೋಡ್, ಎಲಿವೇಟೆಡ್ ರಸ್ತೆ ನಿರ್ಮಾಣದ ಬಗ್ಗೆ ಸಲಹೆಗಳು ವ್ಯಕ್ತವಾದವು. ವಿದ್ಯುತ್ ಚಾಲಿತ ಬಸ್ಗಳು, ಉಪನಗರ ಯೋಜನೆ ಅನುಷ್ಠಾನದ ಜತೆಗೆ ಮೆಟ್ರೋ ರೈಲು ಮಾರ್ಗ ನಿರ್ಮಾಣದ ವೇಗ ಹೆಚ್ಚಿಸುವ ಬಗ್ಗೆಯೂ ಪ್ರಸ್ತಾಪವಾಯಿತು.
ಬೆಂಗಳೂರಿನ ಮಾಸ್ಟರ್ಪ್ಲಾನ್ನಲ್ಲಿನ ಸಮಸ್ಯೆಗಳ ಕುರಿತು ಪ್ರಸ್ತಾಪವಾಗಿ ಪರಿಷ್ಕರಣೆ ಬಗ್ಗೆಯೂ ಸಲಹೆ ವ್ಯಕ್ತವಾಗಿದೆ.ಈಗಿನ ವ್ಯವಸ್ಥೆ ಬಗ್ಗೆ ವಿಕೇಂದ್ರೀಕರಣದ ಸಲಹೆಯೂ ಬಂದಿದ್ದು, ಈ ಎಲ್ಲಾ ಸಲಹೆಗಳ ಬಗ್ಗೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ತೀರ್ಮಾನ ಕೈಗೊಳ್ಳಲಾಗುವುದು ಎಂದುಅಶ್ವತ್ಥನಾರಾಯಣ ಹೇಳಿದರು.






