ಬೆಂಗಳೂರು, ಆ.31-ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಪ್ರಕರಣದಲ್ಲಿ ಕಾದು ನೋಡುವ ನಿಲುವನ್ನು ಕಾಂಗ್ರೆಸ್ ನಾಯಕರು ಅನುಸರಿಸುತ್ತಿದ್ದಾರೆ.
ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತರಾತುರಿಯಲ್ಲಿ ನೋಟಿಸ್ ಕೊಟ್ಟು ನಿನ್ನೆ ತಡರಾತ್ರಿಯವರೆಗೂ ವಿಚಾರಣೆ ನಡೆಸಿದ್ದು, ಇನ್ನೂ ಕೂಡ ವಿಚಾರಣೆ ಮುಂದುವರೆಸಿದ್ದಾರೆ.
ಒಂದು ವೇಳೆ ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ಪೂರ್ಣಗೊಳಿಸಿ ಬಿಡುಗಡೆ ಮಾಡಿದರೆ ಕಾಂಗ್ರೆಸ್ ಪ್ರತಿಭಟನೆಗಿಳಿಯದೆ ತಟಸ್ಥವಾಗಿ ಉಳಿಯಲಿದೆ.ಇಲ್ಲದೆ ಹೋದರೆ ಡಿ.ಕೆ.ಶಿವಕುಮಾರ್ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಈ ಇಬ್ಬರ ಪ್ರಕರಣಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.
ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೂ ಅದೇ ಆರೋಪಗಳನ್ನು ಆಧಾರವಾಗಿಟ್ಟುಕೊಂಡು ಜಾರಿ ನಿರ್ದೇಶನಾಲಯ ವಿಚಾರಣೆ ನಡೆಸುವ ಮೂಲಕ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿರುವುದು, ತಡರಾತ್ರಿ ಸಮನ್ಸ್ ನೀಡಿ ನಾಳೆ ಮಧ್ಯಾಹ್ನವೇ ವಿಚಾರಣೆಗೆ ಹಾಜರಾಗಿ ಎಂದು ಒತ್ತಡ ಹೇರುವುದು ಸೇರಿದಂತೆ ಹಲವಾರು ಪ್ರಯತ್ನಗಳನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಶತಾಯಗತಾಯ ಡಿ.ಕೆ.ಶಿವಕುಮಾರ್ ಅವರನ್ನು ಬೆದರಿಸಿ ರಾಜಕೀಯವಾಗಿ ಮುಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂಬ ಅಸಮಾಧಾನ ಕಾಂಗ್ರೆಸ್ನಲ್ಲಿ ಕುದಿಯುತ್ತಿದೆ.
ವಿಚಾರಣೆಗೂ ಮುನ್ನ ಪ್ರತಿಭಟನೆಗಿಳಿದರೆ ಸಾರ್ವಜನಿಕರ ದೃಷ್ಟಿಯಲ್ಲಿ ತಪ್ಪು ಸಂದೇಶ ಹೋಗುತ್ತದೆ. ಹಾಗಾಗಿ ವಿಚಾರಣೆಗೆ ಎಲ್ಲಾ ರೀತಿಯ ಸಹಕಾರ ನೀಡುವುದು. ಅದನ್ನೂ ಮೀರಿ ಡಿಕೆಶಿಯವರನ್ನು ಬಂಧಿಸಿದರೆ ಅದನ್ನು ಜನತಾ ನ್ಯಾಯಾಲಯದಲ್ಲಿ ಪ್ರಶ್ನಿಸಿ ಪ್ರತಿಭಟನೆ ಮಾರ್ಗ ಹಿಡಿಯಲು ಕಾಂಗ್ರೆಸ್ ನಿರ್ಧರಿಸಿದೆ.
ಡಿ.ಕೆ.ಶಿವಕುಮಾರ್ ಅವರಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಮನ್ಸ್ ನೀಡುತ್ತಿದ್ದಂತೆ ಹಲವಾರು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಕರೆ ಮಾಡಿ ಧೈರ್ಯ ತುಂಬಿದ್ದಾರೆ.ಆದರೆ ರಾಜ್ಯದ ನಾಯಕರ್ಯಾರೂ ನೇರವಾಗಿ ಡಿ.ಕೆ.ಶಿವಕುಮಾರ್ ಜೊತೆ ಕಾಣಿಸಿಕೊಳ್ಳದೆ ಅಂತರ ಕಾಯ್ದುಕೊಂಡಿದ್ದಾರೆ.ಈವರೆಗಿನ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಮಾಜಿ ಸಚಿವ ಪ್ರಿಯಾಂಕ್ಖರ್ಗೆ ಮಾತ್ರ ಬಹಿರಂಗ ಹೇಳಿಕೆಗಳನ್ನು ನೀಡಿ ಡಿ.ಕೆ.ಶಿವಕುಮಾರ್ ಪ್ರಕರಣದ ಹಿಂದೆ ಕೇಂದ್ರ ಸರ್ಕಾರದ ಹುನ್ನಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಳಿದಂತೆ ಯಾವ ನಾಯಕರೂ ತುಟಿ ಬಿಚ್ಚಿಲ್ಲ. ಸಣ್ಣಪುಟ್ಟ ವಿಷಯಗಳಿಗೂ ಟ್ವಿಟರ್, ಫೇಸ್ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆಯುತ್ತಿದ್ದ ಪ್ರಭಾವಿ ನಾಯಕರು ಡಿ.ಕೆ.ಶಿವಕುಮಾರ್ ಪ್ರಕರಣದಲ್ಲಿ ಮಾತನಾಡಲು ಹಿಂದೇಟು ಹಾಕುತ್ತಿದ್ದಾರೆ.
ಬಹುತೇಕ ಇಂದು ಸಂಜೆಯೊಳಗಾಗಿ ಬಂಧನವೋ, ಬಿಡುಗಡೆಯೋ ಎಂಬ ವಿಷಯ ಇತ್ಯರ್ಥಗೊಳ್ಳಲಿದೆ.ಅದಕ್ಕಾಗಿ ನಾಳೆಯವರೆಗೂ ಕಾದು ನೋಡುವುದಾಗಿ ಕೆಲವು ನಾಯಕರು ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾಳೆ ಪತ್ರಿಕಾಗೋಷ್ಠಿ ಕರೆದು ಎಲ್ಲಾ ವಿಚಾರಗಳನ್ನು ಸಂಪೂರ್ಣವಾಗಿ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಕೇಂದ್ರದ ನಾಯಕರ ಪರವಾಗಿ ಯಾರಾದರೂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಬಹುದು ಎಂಬ ನಿರೀಕ್ಷೆಗಳು ಹುಸಿಯಾಗಿವೆ. ಹಿಂದೆ ಗುಜರಾತ್ ಶಾಸಕರನ್ನು ಬಿಜೆಪಿಯ ಆಪರೇಷನ್ ಕಮಲದಿಂದ ಕಾಪಾಡಿಕೊಳ್ಳಲು ಬೆಂಗಳೂರಿಗೆ ಕರೆತಂದಾಗ ಡಿ.ಕೆ.ಶಿವಕುಮಾರ್ ಅವರಿಗೆ ಕಾವಲುಗಾರನಾಗಿ ನಿಂತು ಪಕ್ಷದ ಕೆಲಸ ಮಾಡಿದ್ದರು. ಅದೇ ವೇಳೆ ಆದಾಯ ತೆರಿಗೆ ದಾಳಿ ನಡೆದಿತ್ತು.ಅಲ್ಲಿಂದ ಶುರುವಾದ ಸಂಕಟಗಳು ಡಿ.ಕೆ.ಶಿವಕುಮಾರ್ ಅವರನ್ನು ಇಂಚಿಂಚು ಹಿಂಸಿಸಿ ಕಾಡುತ್ತಿವೆ.
ಅವರು ಪಕ್ಷದಲ್ಲಿ ಪ್ರಭಾವಿ ಸ್ಥಾನ ಹೊಂದಿದ್ದಾಗ ಬಹಳಷ್ಟು ನಾಯಕರು ಡಿಕೆಶಿ ಪರ ಹೇಳಿಕೆಗಳನ್ನು ನೀಡಿ ಪ್ರಚಾರ ಪಡೆದಿದ್ದಾರೆ.ಅವರ ಜೊತೆ ಕಾಣಿಸಿಕೊಳ್ಳುವ ನಾಟಕವಾಡುತ್ತಾರೆ.ಆದರೆ ಸಂಕಷ್ಟದ ಕಾಲದಲ್ಲಿ ಜಾಣತನದಿಂದ ನುಣುಚಿಕೊಂಡು, ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಒಳಗೊಳಗೆ ಖುಷಿ ಪಡುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಅವರೇ ಹೇಳಿಕೊಂಡಂತೆ ಹೆಚ್ಚು ಪ್ರಭಾವಿಗಳಾದಷ್ಟು ಶತ್ರುಗಳೂ ಹೆಚ್ಚಾಗುತ್ತಾರೆ ಎಂಬಂತೆ ರಾಜಕೀಯದಲ್ಲಿ ಮಿತ್ರರಿಗಿಂತಲೂ ಶತ್ರುಗಳೇ ಹೆಚ್ಚಿದ್ದಾರೆ.ಜಾರಿ ನಿರ್ದೇಶನಾಲಯದ ವಿಚಾರಣೆ ಪ್ರಕರಣ ಕೆಲವು ಕಾಂಗ್ರೆಸ್ ನಾಯಕರಿಗೆ ಒಳಗೊಳಗೇ ಖುಷಿ ನೀಡಿದಂತಿದೆ. ಆದರೆ ಪಕ್ಷದ ಒಟ್ಟಾರೆ ಸಂಘಟನೆಯ ದೃಷ್ಟಿಯಿಂದ ಡಿ.ಕೆ.ಶಿವಕುಮಾರ್ ಅಂಥವರ ಸಂಕಷ್ಟ ಸಂದರ್ಭಗಳು ಕಾರ್ಯಕರ್ತರಿಗೆ ನೋವುಂಟು ಮಾಡಿದೆ.
ಯಾವ ಮುಖಂಡತ್ವವೂ ಇಲ್ಲದೆ ಇಂದು ಏಕಾಏಕಿ ಕನಕಪುರ ಮತ್ತು ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆದಿದೆ.ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮುಂದೆ ಬಂದು ರಸ್ತೆ ತಡೆ ನಡೆಸಿ, ಟೈರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದು, ಕೇಂದ್ರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವ ಕಾಂಗ್ರೆಸ್, ಎನ್ಎಸ್ಯುಐ ಸೇರಿದಂತೆ ಹಲವಾರು ಘಟಕಗಳು ಡಿಕೆಶಿ ಪರವಾಗಿ ಪ್ರತಿಭಟನೆ ನಡೆಸಲು ಮುಂದಾಗಿವೆÉಯಾದರೂ ಹಿರಿಯ ನಾಯಕರು ಕಾದುನೋಡುವಂತೆ ಸಲಹೆ ನೀಡಿದ್ದಾರೆ.ಇಂದು ಡಿ.ಕೆ.ಶಿವಕುಮಾರ್ ಅವರ ವಿಚಾರಣೆ ಮುಕ್ತಾಯಗೊಳಿಸದೆ ಇದ್ದರೆ ಹಬ್ಬದ ನಂತರ ಪ್ರತಿಭಟನೆಗಳು ಹೆಚ್ಚಾಗಲಿವೆ. ಬಿಜೆಪಿ ವಿರುದ್ಧ ಪ್ರತಿಭಟನೆಗೆ ಚಿದಂಬರಂ ಹಾಗೂ ಡಿ.ಕೆ.ಶಿವಕುಮಾರ್ ಅವರ ಈ ಪ್ರಕರಣಗಳು ಕಾಂಗ್ರೆಸ್ ಪಾಲಿಗೆ ಬ್ರಹ್ಮಾಸ್ತ್ರಗಳಾಗುವ ಸಾಧ್ಯತೆಗಳಿವೆ.