ಸಚಿವರಿಗೆ ಸರ್ಕಾರಿ ಬಂಗಲೆಗಳ ಪ್ರವೇಶಕ್ಕೆ ಕೂಡಿ ಬರದ ಮುಹೂರ್ತ

ಬೆಂಗಳೂರು, ಆ.31-ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳಾಗಿ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಿದ್ದರೂ ಸರ್ಕಾರಿ ಬಂಗಲೆಗಳಿಗೆ ಪ್ರವೇಶ ಮಾಡುವ ಸೌಭಾಗ್ಯ ಇನ್ನೂ ಕೂಡಿ ಬಂದಿಲ್ಲ.

ಕಾರಣ ಹಿಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದವರು ಸರ್ಕಾರಿ ಬಂಗಲೆಗಳನ್ನು ಖಾಲಿ ಮಾಡದೆ ಅಲ್ಲಿಯೇ ಝಾಂಡಾ ಊರಿದ್ದಾರೆ.ಹೀಗಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟಕ್ಕೆ ಇದೇ 21 ರಂದು ಸೇರ್ಪಡೆಯಾಗಿದ್ದ ಸಚಿವರಿಗೆ ಸರ್ಕಾರಿ ಬಂಗಲೆಗಳ ಪ್ರವೇಶಕ್ಕೆ ಮುಹೂರ್ತ ಕೂಡಿ ಬಂದಿಲ್ಲ.

ಈಗಾಗಲೇ ಬಿಎಸ್‍ವೈ ಸಚಿವರಿಗೆ ಸರ್ಕಾರಿ ಬಂಗಲೆಗಳನ್ನು ನಿಗದಿಪಡಿಸಿದ್ದಾರೆ.ಆದರೆ ಈ ಬಂಗಲೆಗಳನ್ನು ಇನ್ನೂ ಮಾಜಿ ಸಚಿವರೇ ಖಾಲಿ ಮಾಡದ ಕಾರಣ ಯಾವುದೇ ನೂತನ ಸಚಿವರು ಅಧಿಕೃತವಾಗಿ ಪ್ರವೇಶ ಮಾಡಿಲ್ಲ.

ಕರ್ನಾಟಕ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಪ್ರಕಾರ ಸಚಿವರಿಗೆ ನಿಗದಿಪಡಿಸಿದ ಬಂಗಲೆಗಳನ್ನು ಮೂರು ತಿಂಗಳೊಳಗೆ ಖಾಲಿ ಮಾಡಬೇಕೆಂಬ ನಿಯಮವಿದೆ. ಮೊದಲು ಒಂದು ತಿಂಗಳು ಸರ್ಕಾರವೇ ಬಾಡಿಗೆಯನ್ನು ಪಾವತಿಸುತ್ತದೆ.ಎರಡನೇ ತಿಂಗಳು ಶೇ.40ರಷ್ಟು ಬಾಡಿಗೆಯನ್ನು ಸಂಬಂಧಪಟ್ಟವರು ಕಟ್ಟಬೇಕು.ಮೂರನೇ ತಿಂಗಳು ಉಳಿದರೆ ಶೇ.100ರಷ್ಟು ಬಾಡಿಗೆ ಪಾವತಿಸಬೇಕು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ಸಚಿವರಾಗಿದ್ದವರು ಈವರೆಗೂ ಬಂಗಲೆಗಳನ್ನು ತೆರವುಗೊಳಿಸಿಲ್ಲ. ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆಗಳು ಸಂಬಂಧಪಟ್ಟವರಿಗೆ ಈಗಾಗಲೇ ದೂರವಾಣಿ ಹಾಗೂ ಪತ್ರ ಮುಖೇನ ಮಾಹಿತಿ ನೀಡಿದ್ದು, ಯಾವಾಗ ತೆರವುಗೊಳಿಸುತ್ತೀರಿ ಎಂದು ಕೇಳಿದ್ದಾರೆ.

ಪ್ರತಿಷ್ಠಿತ ಬಂಗಲೆಗಳಿಗೆ ಪಟ್ಟು: ಯಡಿಯೂರಪ್ಪ ಸಂಪುಟದಲ್ಲಿರುವ ಅನೇಕ ಸಚಿವರು ಪ್ರತಿಷ್ಠಿತ ಬಂಗಲೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅದರಲ್ಲೂ ಅದೃಷ್ಟದ ಮನೆಗಳೆಂದೇ ಹೇಳಲಾಗುವ ಅನುಗ್ರಹ, ಕಾವೇರಿ ನಿವಾಸಗಳನ್ನು ಪಡೆಯಲು ಲಾಬಿ ನಡೆಸಿದ್ದಾರೆ.ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಸ್ತವ್ಯ ಹೂಡಿರುವ ಕಾವೇರಿ ಮೇಲೆ ಅನೇಕರು ಕಣ್ಣಿಟ್ಟಿದ್ದಾರೆ.

ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಮಗೆ ಈ ನಿವಾಸ ನೀಡುವಂತೆ ಬಿಎಸ್‍ವೈಗೆ ಮನವಿ ಮಾಡಿದ್ದಾರೆ. ಯಾವುದೇ ಸಚಿವರಿಗೆ ನಿವಾಸಗಳನ್ನು ನಿಗದಿಪಡಿಸುವ ಅಧಿಕಾರವನ್ನು ಮುಖ್ಯಮಂತ್ರಿ ಹೊಂದಿರುತ್ತಾರೆ.ಒಂದು ವೇಳೆ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾದರೆ ಈ ನಿವಾಸ ಬಿಟ್ಟುಕೊಡುವ ಸಾಧ್ಯತೆ ತೀರಾ ಕಡಿಮೆ.ಅವರು ಕೂಡ ಕಾವೇರಿ ನಿವಾಸವನ್ನು ಅದೃಷ್ಟದ ಬಂಗಲೆಯೆಂದೇ ಭಾವಿಸಿದ್ದಾರೆ.

ಮುಖ್ಯಮಂತ್ರಿಯಾದ ಸಂದರ್ಭದಲ್ಲೂ ಅವರು ಈ ಇಲ್ಲಿಯೇ ವಾಸ್ತವ್ಯಹೂಡಿದ್ದರು.ಕಾವೇರಿಗೆ ಹೊಂದಿಕೊಂಡಿರುವ ಅನುಗ್ರಹದ ಮೇಲೂ ಅನೇಕರು ಕಣ್ಣಿಟ್ಟಿದ್ದಾರೆ. ಲೋಕೋಪಯೋಗಿ ಸಚಿವ ಗೋವಿಂದಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕರು ತಮಗೆ ನೀಡುವಂತೆ ಕೋರಿದ್ದಾರೆ.

ಇನ್ನು ಗಾಂಧಿಭವನದ ಹತ್ತಿರವಿರುವ ಬಂಗಲೆ ಮೇಲೂ ಕೆಲವರ ಕಣ್ಣು ಬಿದ್ದಿದೆ. ಸದ್ಯಕ್ಕೆ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಸವಿದ್ದು, ಇದುವರೆಗೂ ಖಾಲಿ ಮಾಡಿಲ್ಲ. ಬಾಲಬ್ರೂಹಿ ಅತಿಥಿ ಗೃಹ ಹಿಂಭಾಗವಿರುವ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರ್ರಸ್ ನಿವಾಸಗಳನ್ನು ಅನೇಕರು ಪಡೆಯುವ ಯತ್ನ ಮಾಡಿದ್ದಾರೆ.ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ಅನೇಕರು ಇನ್ನೂ ಅಲ್ಲಿಯೇ ಉಳಿದುಕೊಂಡಿರುವುದರಿಂದ ನೂತನ ಸಚಿವರ ಗೃಹ ಪ್ರವೇಶ ಮುಹೂರ್ತಕ್ಕೆ ಕಾಲ ಸನ್ನಿಹಿತವಾಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ