ಬೆಂಗಳೂರು, ಆ.31- ಕಾಂಗ್ರೆಸ್-ಜೆಡಿಎಸ್ನಿಂದ ಅನರ್ಹಗೊಂಡಿರುವ 17 ಶಾಸಕರಿಂದ ತೆರವಾಗಿರುವ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ ತಿಂಗಳ ಮಧ್ಯ ಭಾಗದಲ್ಲಿ ಉಪಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ಅಕ್ಟೋಬರ್ನಲ್ಲಿ ಮಹಾರಾಷ್ಟ್ರ, ಹರಿಯಾಣ ಮತ್ತು ಛತ್ತೀಸ್ಗಡ ರಾಜ್ಯಗಳ ವಿಧಾನಸಬೆ ಚುನಾವಣೆ ನಡೆಯಲಿದೆ.ಈ ಮೂರು ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡುವ ಸಂದರ್ಭದಲ್ಲೇ ರಾಜ್ಯದ 17 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮುಹೂರ್ತ ನಿಗದಿಯಾಗಲಿದೆ.
ಈಗಾಗಲೇ ಮೂರು ರಾಜ್ಯಗಳಲ್ಲಿ ಮತದಾರರ ಅಂತಿಮ ಕರಡು ಪಟ್ಟಿ ಸಿದ್ಧಗೊಂಡಿದೆ.ಅಕ್ಟೋಬರ್ ಮಧ್ಯಭಾಗದಲ್ಲಿ ಚುನಾವಣೆ ನಡೆಸಲು ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಚುನಾವಣಾ ಆಯೋಗಕ್ಕೆ ಹರಿಯಾಣ, ಮಹಾರಾಷ್ಟ್ರ ಮತ್ತು ಛತ್ತೀಸ್ಗಡ ರಾಜ್ಯಗಳ ಮುಖ್ಯ ಚುನಾವಣಾ ಅಧಿಕಾರಿಗಳು ಪತ್ರ ಬರೆದಿದ್ದಾರೆ.
ಹೀಗಾಗಿ ಕರ್ನಾಟಕದ ಉಪಚುನಾವಣೆಗೂ ಅಂದೇ ದಿನಾಂಕ ನಿಗದಿಯಾಗಲಿದೆ.ಇದರ ಸುಳಿವರಿತಿರುವ ಬಿಜೆಪಿ ಉಪಸಮರಕ್ಕೆ ಸದ್ದಿಲ್ಲದೆ ಅಭ್ಯರ್ಥಿಗಳ ಶೋಧಕ್ಕೆ ಮುಂದಾಗಿದೆ.ಈಗಾಗಲೇ ಸದಸ್ಯತ್ವ ನೋಂದಣಿ ಅಭಿಯಾನದ ಮೂಲಕ ಮನೆ ಮನೆಗೆ ಸಂಪರ್ಕಿಸಿ ಮತದಾರರ ಸೆಳೆಯುವ ಪ್ರಯತ್ನವನ್ನು ಮಾಡಿದೆ.
ಶತಾಯಗತಾಯ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಪಣತೊಟ್ಟಿರುವ ಬಿಜೆಪಿ ನಾಯಕರು ಉಪಸಮರದಲ್ಲಿ ಯಾವುದೇ ರೀತಿಯ ಗೊಂದಲ, ಭಿನ್ನಮತ , ಅಸಮಾಧಾನಕ್ಕೆ ಕಾರಣವಿಲ್ಲದಂತೆ ಎಚ್ಚರಿಕೆ ಹೆಜ್ಜೆ ಇಟ್ಟಿದ್ದಾರೆ. 17 ಸ್ಥಾನಗಳ ಪೈಕಿ ಕನಿಷ್ಠ 12ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಗುರಿ ಇಟ್ಟುಕೊಂಡಿದೆ.
ಸದ್ಯಕ್ಕೆ ವಿಧಾನಸಭೆ ಬಲಾಬಲದಲ್ಲಿ ಬಿಜೆಪಿ 105 ಸದಸ್ಯರನ್ನು ಹೊಂದಿದೆ.ಸದನದ ಒಟ್ಟು 224 ಸದಸ್ಯರ ಪೈಕಿ ಸರಳ ಬಹುಮತವಾಗಿ ಆಡಳಿತ ನಡೆಸಲು 112 ಸದಸ್ಯರನ್ನು ಹೊಂದಿರಬೇಕು.ಬಿಜೆಪಿಗೆ 7 ಸ್ಥಾನಗಳಲ್ಲಿ ಗೆದ್ದರೆ ಯಾವುದೇ ಸಮಸ್ಯೆ ಇಲ್ಲ. ಆದರೆ ಆಗಾಗ್ಗೆ ಪಕ್ಷದಲ್ಲಿ ಉಂಟಾಗುವ ಅಸಮಾಧಾನ, ಭಿನ್ನಮತೀಯರು ಕೈ ಕೊಡಬಹುದೆಂಬ ಹಿನ್ನೆಲೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.
ಭರ್ಜರಿ ಸಿದ್ಧತೆ: ರಾಜಧಾನಿ ಬೆಂಗಳೂರಿನ ಕೆ.ಆರ್.ಪುರಂ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿನಗರ, ಶಿವಾಜಿನಗರ ಕ್ಷೇತ್ರಗಳಿಗೆ ಗೆಲ್ಲುವ ಅಭ್ಯರ್ಥಿಗಳನ್ನೇ ಹುಡುಕಲಾಗುತ್ತಿದೆ. ಮಹಾಲಕ್ಷ್ಮಿ ಲೇಔಟ್ನಿಂದ ಗೋಪಾಲಯ್ಯ ಸ್ಪರ್ಧಿಸುವುದು ಇನ್ನು ಖಚಿತವಾಗಿಲ್ಲ. ಅಲ್ಲದೆ ಅವರಿಗೆ ಟಿಕೆಟ್ ನೀಡಲು ಸ್ಥಳೀಯ ಮಟ್ಟದಲ್ಲಿ ದೊಡ್ಡ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಬಿಜೆಪಿ ಪರ್ಯಾಯ ಅಭ್ಯರ್ಥಿಯನ್ನು ನೋಡುತ್ತಿದೆ.
ಬಿಬಿಎಂಪಿ ಮಾಜಿ ಮೇಯರ್ ಎಸ್.ಹರೀಶ್, ಕೇಂದ್ರದ ಮಾಜಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್.ಕೃಷ್ಣ ಅವರ ಮೊಮ್ಮಗ ಡಾ.ನಿರಂತರ್ ಗಣೇಶ್ ಸೇರಿದಂತೆ ಹಲವರು ಆಕಾಂಕ್ಷಿಗಳಿದ್ದಾರೆ. ರಾಜರಾಜೇಶ್ವರಿ ನಗರದಿಂದ ಕಳೆದ ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದ ತುಳಸಿ ಮುನಿರಾಜೇಗೌಡ ಸೇರಿದಂತೆ ಒಂದು ಡಜನ್ ಆಕಾಂಕ್ಷಿಗಳಿದ್ದಾರೆ.
ಶಿವಾಜಿನಗರದಲ್ಲಿ ಮಾಜಿ ಶಾಸಕ ರೋಷನ್ಬೇಗ್ ಪುತ್ರ ರೋಹನ್ಬೇಗ್, ಮಾಜಿ ಶಾಸಕ ನಿರ್ಮಲ್ಕುಮಾರ್ ಸುರಾನಾ, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಅನೇಕರು ಕಣ್ಣಿಟ್ಟಿದ್ದಾರೆ.
ಯಶವಂತಪುರದಿಂದ ಮಾಜಿ ಶಾಸಕ ಎಸ್.ಟಿ.ಸೋಮಶೇಖರ್ ಆಕಾಂಕ್ಷಿಯಾಗಿದ್ದರೆ, ಇಲ್ಲಿ ಕೂಡ ಬಿಜೆಪಿಗೆ ಪ್ರಬಲವಾದ ಆಕಾಂಕ್ಷಿಗಳ ಪಟ್ಟಿ ತಲೆ ನೋವು ತಂದಿದೆ.
ಕೆ.ಆರ್.ಪುರದಿಂದ ಮಾಜಿ ಶಾಸಕ ನಂದೀಶ್ರೆಡ್ಡಿ ಆಕಾಂಕ್ಷಿಯಾಗಿದ್ದರೂ ಕಮಲದ ತೆಕ್ಕೆಗೆ ಭೆರತಿ ಬಸವರಾಜ್ ಸೇರಿದರೆ ಅವರ ಕುಟುಂಬದ ಸದಸ್ಯರಿಗೆ ಮಣೆ ಹಾಕುವ ಸಂಭವವಿದೆ.
ಹುಣಸೂರಿನಿಂದ ಮಾಜಿ ಶಾಸಕ ಎಚ್.ವಿಶ್ವನಾಥ್ ಪುತ್ರ, ಹಾಲಿ ಶಾಸಕ ಜಿ.ಟಿ.ದೇವೇಗೌಡ ಪುತ್ರ ಹರೀಶ್ಗೌಡ, ಕೆ.ಆರ್.ಪೇಟೆಯಿಂದ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಕಣಕ್ಕಿಳಿಯಬೇಕೆಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಉಳಿದಂತೆ ಮಸ್ಕಿ, ಗೋಕಾಕ್, ಅಥಣಿ, ಕಾಗವಾಡ, ಹಿರೇಕೆರೂರು, ರಾಣೆಬೆನ್ನೂರು, ಚಿಕ್ಕಬಳ್ಳಾಪುರ, ಹೊಸಕೋಟೆ ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿ ಬಿಜೆಪಿಗೆ ಒಮ್ಮತದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ತಲೆನೋವಾಗಿ ಪರಿಣಮಿಸಿದೆ.
ಪ್ರತಿ ಕ್ಷೇತ್ರಕ್ಕೂ ಮೂರರಿಂದ ಐದು ಮಂದಿ ಆಕಾಂಕ್ಷಿಗಳು ಇರುವ ಕಾರಣ ಯಾರಿಗೆ ಟಿಕೆಟ್ ನೀಡಬೇಕು, ಒಂದು ವೇಳೆ ಟಿಕೆಟ್ ನೀಡದಿದ್ದರೆ ಅಸಮಾಧಾನಗೊಳ್ಳುವ ಶಾಸಕರನ್ನು ಒಟ್ಟಿಗೆ ಕರೆದೊಯ್ಯುವುದು ಹೇಗೆಂಬುದು ಬಿಎಸ್ವೈಗೆ ಹೊಸ ತಲೆನೋವಾಗಿ ಪರಿಣಮಿಸಲಿದೆ.