ಸರ್ಕಾರದ ಪರಿಹಾರ ನೇರವಾಗಿ ಕೈ ಸೇರಲು ಸ್ಕ್ವಾಡ್ ರಚನೆ-ಕಂದಾಯ ಸಚಿವ ಆರ್.ಅಶೋಕ್

ಬೆಂಗಳೂರು, ಆ.28-ರಾಜ್ಯದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ಸಂತ್ರಸ್ತರಿಗೆ ಸರ್ಕಾರದ ಪರಿಹಾರ ನೇರವಾಗಿ ಕೈ ಸೇರಲು ಸ್ಕ್ವಾಡ್ ರಚನೆ ಮಾಡಲಾಗುವುದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ನೆರೆ ಸಂದರ್ಭದಲ್ಲಿ ದಾನಿಗಳು, ಉದ್ಯಮಿಗಳು, ಸಾರ್ವಜನಿಕರು, ಸಂಘ ಸಂಸ್ಥೆಗಳು ಸೇರಿದಂತೆ ಮತ್ತಿತರರು ಉದಾರವಾಗಿ ದೇಣಿಗೆ ನೀಡುತ್ತಾರೆ. ಇದು ಸಂತ್ರಸ್ತರ ಕೈಗೆ ತಲುಪದೆ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ. ಹೀಗಾಗಿ ಇದನ್ನು ತಪ್ಪಿಸಲು ಸ್ಕ್ವಾಡ್‍ರಚನೆ ಮಾಡುವುದಾಗಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಕ್ವಾಡ್ ರಚನೆಯಾಗುವುದರಿಂದ ನೇರವಾಗಿ ಸಂತ್ರಸ್ತರಿಗೆ ಸರ್ಕಾರದ ಸಹಾಯಧನ ತಲುಪಲಿದೆ. ಮಧ್ಯವರ್ತಿಗಳ ಕಿರಿಕಿರಿಯೂ ಇರುವುದಿಲ್ಲ. ಅಲ್ಲದೆ, ಸಂತ್ರಸ್ತರ ಸಮಸ್ಯೆ ಆಲಿಸಲು ಸ್ಕ್ವಾರ್ಡ್ ರಚನೆ ಮಾಡಬೇಕೆಂಬ ಅಭಿಪ್ರಾಯಗಳು ಕೇಳಿಬಂದಿದೆ. ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುತ್ತೇನೆ ಎಂದರು.

ರಾಜ್ಯದಲ್ಲಿ ನೆರೆಯಿಂದ ಎಷ್ಟು ಪ್ರಮಾಣದಲ್ಲಿ ನಷ್ಟಸಂಭವಿಸಿದೆ ಎಂಬುದನ್ನು ಇನ್ನೆರಡು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದ್ದೇವೆ. ರಾಜ್ಯಕ್ಕೆ ಆಗಮಿಸಿದ ಕೇಂದ್ರ ಅಧ್ಯಯನ ತಂಡಕ್ಕೂ ಮಾಹಿತಿ ಒದಗಿಸಲಾಗಿದೆ. ನಮಗೆ ಕೇಂದ್ರದಿಂದ ಎಲ್ಲಾ ರೀತಿಯ ನೆರವು ಸಿಗುತ್ತದೆ. ನಮ್ಮ ನಿರೀಕ್ಷೆಗೂ ಮೀರಿದ ಹೆಚ್ಚಿನ ಆರ್ಥಿಕ ಸಹಾಯ ಸಿಗಲಿದೆ ಎಂಬ ವಿಶ್ವಾಸವನ್ನು ಅಶೋಕ್ ವ್ಯಕ್ತಪಡಿಸಿದರು.

ನೆರೆಪೀಡಿತ ಪ್ರದೇಶಗಳಲ್ಲಿ 43 ತಂಡಗಳು ಕೆಲಸ ಮಾಡುತ್ತಿವೆ. 19 ಎನ್‍ಡಿಆರ್‍ಎಫ್ ತಂಡ,4 ನೇವಿ ತಂಡ, 5 ಕೋಸ್ಟಲ್‍ಗಾರ್ಡ್‍ಗಳ ತಂಡ ನೆರೆಪೀಡಿತ ಪ್ರದೇಶಗಳಲ್ಲಿ ಕೆಲಸ ಮಾಡಿದೆ. ಈವರೆಗೂ 7 ಲಕ್ಷ ಜನರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದೇವೆ ಎಂದು ವಿವರಿಸಿದರು.

ನೆರೆಯಿಂದ ಎಷ್ಟು ನಷ್ಟ ಸಂಭವಿಸಿದೆ ಎಂಬುದರ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಒಂದು ಅಂದಾಜಿನ ಪ್ರಕಾರ 37 ಸಾವಿರ ಕೋಟಿರೂ.ಗಳಷ್ಟು ನಷ್ಟ ಸಂಭವಿಸಿದೆ. ಕೇಂದ್ರ ಸರ್ಕಾರಕ್ಕೆ ಅಂತಿಮವರದಿ ಸಲ್ಲಿಸಿದ ವೇಳೆ ನಷ್ಟದ ಪ್ರಮಾಣ ಗೊತ್ತಾಗಲಿದೆ.

ಕಳೆದ ಬಾರಿಗಿಂತ ರಾಜ್ಯದಲ್ಲಿ ಈ ಬಾರಿ ಶೇ.12 ರಷ್ಟು ಮಳೆ ಹೆಚ್ಚಾಗಿದೆ.ಶೇ.279ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.118 ವರ್ಷಗಳಲ್ಲಿ ಈ ಬಾರಿ ಅತ್ಯಂತ ಹೆಚ್ಚಿನ ಮಳೆ ಬಿದ್ದಿದೆ. 825 ಟಿಎಂಸಿ ನೀರು ಜಲಾಶಯಗಳಲ್ಲಿ ಸಂಗ್ರಹವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿದ್ದ ನೀರನ್ನು ಹೊರ ರಾಜ್ಯಗಳಿಗೆ ಬಿಡಲಾಗಿದೆ ಎಂದು ಹೇಳಿದರು.

60.09 ಲಕ್ಷಹೆಕ್ಟೇರ್ ಜಮೀನಿನಲ್ಲಿ ಬಿತ್ತನೆ ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ನೀಡುವ ಕಾರ್ಯ ಆರಂಭವಾಗಿದೆ.
ಸರ್ಕಾರ ಸಂತ್ರಸ್ತರಿಗೆ ಎಲ್ಲಾ ರೀತಿಯ ನೆರವುನೀಡಲಿದೆ ಎಂದು ಅಭಯ ನೀಡಿದರು.
ಬಿಜೆಪಿ ಸರ್ಕಾರದಿಂದಲೂ ಫೆÇೀನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಂಬಂಧಪಟ್ಟವರ ಜೊತೆ ಮಾಹಿತಿ ಪಡೆದು ಪ್ರತಿಕ್ರಿಯಿಸುತ್ತೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ