ಬೆಂಗಳೂರು, ಆ.28- ಕೇಂದ್ರ ಸರ್ಕಾರ ನೆರೆ ಪೀಡಿತ ಪ್ರದೇಶಗಳ ಜನರಿಗೆ ಬಿಡಿಗಾಸನ್ನೂ ನೀಡದೆ ಕರ್ನಾಟಕಕ್ಕೆ ಅಪಮಾನ ಮಾಡಿದೆ ಎಂದು ಮಾಜಿ ಶಾಸಕರ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ಮಾಜಿ ಸಚಿವೆ ಲೀಲಾದೇವಿ ಆರ್.ಪ್ರಸಾದ್, ಅಮೀರ್ ರೆಹಮತ್ ಉಲ್ಲಾಖಾನ್, ಎಸ್.ಎಂ.ಪಾಟೀಲ್, ಕೆ.ಪಿ.ಮುನಿವೆಂಕಟರೆಡ್ಡಿ ಮತ್ತಿತರರು ಮಾತನಾಡಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ರಾಜ್ಯದ ಮುಕ್ಕಾಲು ಭಾಗ ನೆರೆಯಿಂದ ಸಂಕಷ್ಟಕ್ಕೆ ಸಿಲುಕಿದೆ. ಈವರೆಗೂ ಕೇಂದ್ರ ಸರ್ಕಾರ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಪ್ರತಿ ಬಾರಿಯೂ ಕರ್ನಾಟಕದ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯಕ್ಕೆ ಬಂದು ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.ಆ ಸಂದರ್ಭದಲ್ಲಿ ಪರಿಹಾರದ ಬಗ್ಗೆ ಘೋಷಣೆ ಮಾಡಬೇಕಿತ್ತು.ಯಾವುದೇ ಪರಿಹಾರ ನೀಡದೆ ತಮ್ಮ ಪಾಡಿಗೆ ತಾವಿರುವುದು ಸರಿಯಲ್ಲ ಎಂದರು.
ಗುಜರಾತ್, ಕೇರಳ, ಮಹಾರಾಷ್ಟ್ರ ರಾಜ್ಯಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕರ್ನಾಟಕಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂದು ವೇದಿಕೆಯ ರಾಜ್ಯಾಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ಆರೋಪಿಸಿದರು.
ಲೀಲಾದೇವಿ ಆರ್.ಪ್ರಸಾದ್ ಮಾತನಾಡಿ, ಕೇಂದ್ರ ಸರ್ಕಾರದ ಅಧ್ಯಯನ ತಂಡ ಕಾಟಾಚಾರಕ್ಕೆ ಅಧ್ಯಯನ ನಡೆಸಿದೆ. ಜನರ ಕಷ್ಟ ಕೇಳಲು ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ತಂಡ ವಾಪಸ್ ಬಂದಿದೆ. ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡದೇ ಇರುವುದರಿಂದ ಕೇಂದ್ರದ ತಂಡ ಸರಿಯಾಗಿ ಸ್ಪಂದಿಸಿಲ್ಲ ಎಂದು ದೂರಿದರು.
ಮಾಜಿ ಶಾಸಕರ ವೇದಿಕೆ ನಿನ್ನೆ ಕಾರ್ಯಕಾರಿ ಸಮಿತಿ ಸಭೆ ನಡೆಸಿದ್ದು, ಅದರಲ್ಲಿ ಅತಿವೃಷ್ಟಿಯಿಂದ ಸಂಕಷ್ಟಕ್ಕೀಡಾಗಿರುವ ಜನರ ನೆರವಿಗಾಗಿ ವೇದಿಕೆ ಸದಸ್ಯರಿಂದ ದೇಣಿಗೆ ಸಂಗ್ರಹಿಸುವ ತೀರ್ಮಾನ ಕೈಗೊಳ್ಳಲಾಗಿದೆ.ಸಂಗ್ರಹಿಸಿದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗುವುದು.
ವೇದಿಕೆಯಲ್ಲಿ ಸುಮಾರು 800ಕ್ಕೂ ಹೆಚ್ಚು ಮಂದಿ ಮಾಜಿ ಶಾಸಕರಿದ್ದು, ಪ್ರತಿಯೊಬ್ಬರೂ ತಲಾ 10ಸಾವಿರಕ್ಕಿಂತ ಕಡಿಮೆ ಇಲ್ಲದಂತೆ ತಮ್ಮ ಶಕ್ತ್ಯಾನುಸಾರ ನೆರವು ನೀಡಲು ಮನವಿ ಮಾಡಲಾಗಿದೆ.ವೇದಿಕೆಯ ಎಸ್ಬಿಐ ಬ್ಯಾಂಕ್ ಖಾತೆ 6420670466 ಇಲ್ಲಿಗೆ ಹಣ ಸಂದಾಯ ಮಾಡುವಂತೆ ವೈಯಕ್ತಿಕವಾಗಿ ಪತ್ರ ಬರೆಯಲಾಗಿದೆ.
ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸರ್ಕಾರಕ್ಕೂ ಪತ್ರ ಬರೆದಿರುವುದಾಗಿ ವೇದಿಕೆ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ ತಿಳಿಸಿದರು.