ಬೆಂಗಳೂರು, ಆ.28-ಸಚಿವ ಸ್ಥಾನ ಸಿಗದಿರುವ ಕಾರಣ ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿ, ಹೈಕಮಾಂಡ್ಕೆಂಗಣ್ಣಿಗೆ ಗುರಿಯಾಗಬೇಡಿ.ಮುಂದೆ ಅವಕಾಶ ಸಿಕ್ಕೇ ಸಿಗುತ್ತದೆ. ಎಲ್ಲರೂ ಶಾಂತ ರೀತಿಯಲ್ಲಿ ಸಹನೆಯಿಂದ ವರ್ತಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಸಮಾಧಾನಿತರಿಗೆ ಕಿವಿಮಾತು ಹೇಳಿದ್ದಾರೆ.
ಒಂದೆಡೆ ಸಚಿವ ಸ್ಥಾನ ಸಿಗದಿರುವವರು, ಮತ್ತೊಂದೆಡೆ ನಿರ್ದಿಷ್ಟ ಖಾತೆ ಮೇಲೆ ಕಣ್ಣಿಟ್ಟು ಅಸಮಾಧಾನಗೊಂಡಿರುವ ಬೆನ್ನಲ್ಲೇ ಯಡಿಯೂರಪ್ಪ ಶಾಸಕರಿಗೆ ಹಿತೋಪದೇಶ ಮಾಡುವ ಮೂಲಕ ಉಂಟಾಗಿರುವ ಭಿನ್ನಮತವನ್ನು ಸರಿಪಡಿಸಲು ಮುಂದಾಗಿದ್ದಾರೆ.
ಇಂದು ಬೆಳಗ್ಗೆ ತಮ್ಮ ಡಾಲರ್ಸ್ಕಾಲೋನಿ ನಿವಾಸಕ್ಕೆ ಶಾಸಕರಾದ ಗೂಳಿಹಟ್ಟಿ ಶೇಖರ್, ಪಿ.ರಾಜೀವ್, ತಿಪ್ಪಾರೆಡ್ಡಿ, ಸಂಸದ ನಾರಾಯಣಸ್ವಾಮಿ ಸೇರಿದಂತೆ ಮತ್ತಿತರರನ್ನು ಕರೆಸಿಕೊಂಡಿದ್ದರು.
ಸಂಪುಟ ವಿಸ್ತರಣೆಯಾದ ಬಳಿಕ ಪ್ರಮುಖವಾಗಿ ತಿಪ್ಪಾರೆಡ್ಡಿ ಮತ್ತು ಗೂಳಿಹಟ್ಟಿ ಶೇಖರ್ ಪಕ್ಷದ ವರಿಷ್ಠರ ವಿರುದ್ಧ ತಿರುಗಿಬಿದ್ದಿದ್ದರು. ಇದು ಸರ್ಕಾರಕ್ಕೆ ಮುಳುವಾಗಲಿದೆ ಎಂದು ವ್ಯಾಖ್ಯಾನಿಸಲಾಗಿತ್ತು.ಇದೀಗ ಖುದ್ದು ಅಖಾಡಕ್ಕಿಳಿದ ಯಡಿಯೂರಪ್ಪ ಅಸಮಾಧಾನಿತರ ಮನವೊಲಿಸುವ ಕಸರತ್ತು ನಡೆಸಿದ್ದಾರೆ.
ನೀವು ಮಾಧ್ಯಮಗಳಲ್ಲಿ ಬಹಿರಂಗ ಹೇಳಿಕೆ ನೀಡಿದರೆ ನಿಮ್ಮ ಭವಿಷ್ಯಕ್ಕೆ ಮುಳುವಾಗಿ ಪರಿಣಮಿಸಲಿದೆ. ಹೈಕಮಾಂಡ್ ನಾಯಕರು ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮಾಧ್ಯಮಗಳಲ್ಲಿ ಪ್ರಚಾರ ಸಿಗುತ್ತದೆ ಎಂದು ಹೇಳಿಕೆ ನೀಡಿದರೆ ಸಚಿವ ಸ್ಥಾನದಿಂದ ನೀವೇ ವಂಚಿತರಾಗುತ್ತೀರಿ ಎಂದು ಎಚ್ಚರಿಸಿದ್ದಾರೆ.
ಸಂಪುಟ ವಿಸ್ತರಣೆ ಇನ್ನು ಬಾಕಿ ಇದೆ. 16ಸ್ಥಾನಗಳು ಖಾಲಿ ಉಳಿದಿವೆ. ನಮ್ಮನ್ನು ನಂಬಿ ಬಂದಿರುವ ಅನರ್ಹರಿಗೆ ಸಂಪುಟದಲ್ಲಿ ಸ್ಥಾನಮಾನ ನೀಡಬೇಕು. ಅವರಿಗೆ ಅನ್ಯಾಯ ಮಾಡಿದರೆ ಇಡೀ ರಾಜ್ಯಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ. ನಿಷ್ಠಾವಂತರಾದ ನೀವೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಬೇರೆಯವರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಪಕ್ಷಕ್ಕೆ ಮುಜುಗರ ತರುವ ಕೆಲಸವನ್ನು ಯಾರು ಮಾಡಬೇಡಿ.ಮಂತ್ರಿ ಸ್ಥಾನ ಸಿಗದಿದ್ದರೂ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಕ್ಷೇತ್ರದಲ್ಲಿ ಯಾವ್ಯಾವ ಕೆಲಸಗಳು ಆಗಬೇಕು ಎಂಬುದರ ಪಟ್ಟಿ ನೀಡಿ. ಕ್ಷಣಾರ್ಧದಲ್ಲಿ ಮಾಡಿಕೊಡುವೆ. ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿಕೊಂಡರು ಎಂದು ತಿಳಿದುಬಂದಿದೆ.
ಇನ್ನು 3 ವರ್ಷ 9 ತಿಂಗಳು ನಾವೇ ಅಧಿಕಾರದಲ್ಲಿರುತ್ತೇವೆ. ಕಾಲಕ್ಕೆ ತಕ್ಕಂತೆ ಸರ್ಕಾರದಲ್ಲಿ ಬದಲಾವಣೆಗಳಾಗುತ್ತವೆ. ಈಗ ಸಚಿವರಾಗಿರುವವರನ್ನು ಮುಂದೆ ಕೈಬಿಟ್ಟು ಹೊಸಬರಿಗೂ ಅವಕಾಶ ಕೊಡುವ ಸಾಧ್ಯತೆ ಇರುತ್ತದೆ. ನನಗೆ ಹೈಕಮಾಂಡ್ ಸಂಪೂರ್ಣವಾಗಿ ಮುಕ್ತ ಸ್ವತಂತ್ರನೀಡಿದ್ದರೆ ನಿಮ್ಮನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಿದ್ದೆ. ನಮ್ಮದು ಪೂರ್ಣ ಬಹುಮತದ ಸರ್ಕಾರವಲ್ಲ. ಅನರ್ಹರಿಗೂ ಅವಕಾಶ ನೀಡಬೇಕಾಗಿರುವುದರಿಂದ ಕನಿಷ್ಠ 8 ರಿಂದ 10 ಸಚಿವ ಸ್ಥಾನಗಳನ್ನು ಅವರಿಗೆ ಮೀಸಲು ಇಡಬೇಕಾಗಿದೆ. ಪರಿಸ್ಥಿತಿ ತಿಳಿದಿದ್ದು ಈ ರೀತಿ ವರ್ತಿಸಿದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿಗಳ ಸಲಹೆಯನ್ನು ಸಹನೆಯಿಂದಲೇ ಆಲಿಸಿದ ಶಾಸಕರು ನಾವು ಎಂದಿಗೂ ಪಕ್ಷವಿರೋಧಿ ಚಟುವಟಿಕೆ ನಡೆಸಿಲ್ಲ. ಸಚಿವರಾಗಬೇಕೆಂಬ ನಿರೀಕ್ಷೆ ಇತ್ತು. ನಮ್ಮನ್ನು ಕಡೆಗಣಿಸಿದ್ದರಿಂದ ಮಾಧ್ಯಮಗಳ ಮುಂದೆ ಆ ರೀತಿ ಹೇಳಿಕೆ ಕೊಟ್ಟಿದ್ದೇವೆ. ಎಂತಹ ಸಂದರ್ಭದಲ್ಲೂ ಪಕ್ಷಕ್ಕೆ ಮುಜುಗರವಾಗುವ ಕೆಲಸ ಮಾಡುವುದಿಲ್ಲ. ನಿಮ್ಮ ನಾಯಕತ್ವಕ್ಕೆ ಸದಾ ನಮ್ಮ ಬೆಂಬಲ ಇರುತ್ತದೆ ಎಂದು ಹೇಳಿದ್ದಾರೆ.