ಸಿಎಂಗೆ ತಲೆನೋವಾದ ಸಚಿವರ ಜಿಲ್ಲಾ ಉಸ್ತುವಾರಿ ಹಂಚಿಕೆ

ಬೆಂಗಳೂರು, ಆ.28-ಸಾಕಷ್ಟು ಸರ್ಕಸ್ ನಡೆಸಿ ಖಾತೆಗಳನ್ನು ಹಂಚಿಕೆ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ನೂತನ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡುವುದು ಮತ್ತೊಂದು ರೀತಿಯ ತಲೆ ನೋವಾಗಿ ಪರಿಣಮಿಸಿದೆ.
ಕೆಲವರು ತಮಗೆ ಇಂತಹದ್ದೇ ಜಿಲ್ಲೆಯ ಉಸ್ತುವಾರಿ ನೀಡಬೇಕೆಂದು ಈಗಾಗಲೇ ಬಿಎಸ್‍ವೈ ಬಳಿ ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಯಾರಿಗೆ ಯಾವ ಜಿಲ್ಲೆಯ ಉಸ್ತುವಾರಿ ನೀಡಬೇಕು ಎಂಬುದು ಕಗ್ಗಂಟ್ಟಾಗಿದೆ.
ಅದರಲ್ಲೂ ವಿಶೇಷವಾಗಿ ಬೆಂಗಳೂರು ಮಹಾನಗರ, ಬಳ್ಳಾರಿ, ಬೆಳಗಾವಿ ಸೇರಿದಂತೆ ಪ್ರಮುಖ ಜಿಲ್ಲೆಗಳ ಹೊಣೆಗಾರಿಕೆಯನ್ನು ಯಾರಿಗೆ ನೀಡುವುದು ಎಂಬುದೇ ತಲೆನೋವಾಗಿದೆ.

ಬೆಂಗಳೂರು ಮಹಾನಗರದಿಂದ ಯಡಿಯೂರಪ್ಪ ಸಂಪುಟಕ್ಕೆ ನಾಲ್ವರು ಸಚಿವರನ್ನು ತೆಗೆದುಕೊಳ್ಳಲಾಗಿದೆ. ಕಂದಾಯ ಸಚಿವ ಆರ್.ಅಶೋಕ್, ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್‍ನಾರಾಯಣ, ವಸತಿ ಸಚಿವ ವಿ.ಸೋಮಣ್ಣ ಮತ್ತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಸೇರ್ಪಡೆಯಾಗಿದ್ದಾರೆ.

ಈ ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರ್.ಅಶೋಕ್‍ಗೆ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ನೀಡಲಾಗಿತ್ತು.ಜೊತೆಗೆ ಮಂಡ್ಯ ಹೊಣೆಗಾರಿಕೆಯನ್ನೂ ವಹಿಸಲಾಗಿತ್ತು.ಆದರೆ ಈಗ ಅಶ್ವತ್‍ನಾರಾಯಣ ಉಪಮುಖ್ಯಮಂತ್ರಿಯಾಗಿರುವುದರಿಂದ ಯಾರಿಗೆ ಉಸ್ತುವಾರಿ ಕೊಡಬೇಕೆಂಬ ಜಿಜ್ಞಾಸೆ ಎದುರಾಗಿದೆ.
ಒಕ್ಕಲಿಗ ಮತಗಳನ್ನು ಸೆಳೆಯುವ ಉದ್ದೇಶದಿಂದಲೇ ಅಶ್ವತ್‍ನಾರಾಯಣಗೆ ಡಿಸಿಎಂ ಸ್ಥಾನ ಕಲ್ಪಿಸಲಾಗಿದೆ. ಹೀಗಾಗಿ ಮೈಸೂರು ಭಾಗದಲ್ಲಿ ಅವರಿಗೆ ಹೊಣೆಗಾರಿಕೆ ಸಿಗುವ ಸಂಭವವಿದೆ. ಆದರೆ ಅವರು ತಮಗೆ ಬೆಂಗಳೂರು ನಗರದ ಉಸ್ತುವಾರಿ ನೀಡುವಂತೆ ಮನವಿ ಮಾಡಿದ್ದಾರೆ.

ಹಿರಿತನದಲ್ಲಿ ಸುರೇಶ್‍ಕುಮಾರ್ ಹಾಗೂ ಅಶೋಕ್ ಅವರನ್ನು ಕಡೆಗಣಿಸುವಂತಿಲ್ಲ. ಮುಂದೆ ಮಹಾನಗರಪಾಲಿಕೆಯಲ್ಲಿ ಚುಕ್ಕಾಣಿ ಹಿಡಿಯುವ ಅಗತ್ಯವಿರುವುದರಿಂದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಹೊಣೆಗಾರಿಕೆ ಬಿಎಸ್‍ವೈ ಮೇಲಿದೆ.
ಅಶೋಕ್ ಮುನಿಸಿಕೊಳ್ಳಬಾರದೆಂಬ ಕಾರಣಕ್ಕಾಗಿ ಬೆಂಗಳೂರು ಹೊಣೆಗಾರಿಕೆ ನೀಡಿದರೆ, ಅಶ್ವತ್‍ನಾರಾಯಣಗೆ ಮಂಡ್ಯ ಅಥವಾ ರಾಮನಗರದ ಉಸ್ತುವಾರಿ ಸಿಗಲಿದೆ.ಕುಂದಾನಗರಿ ಬೆಳಗಾವಿಯಲ್ಲಿ ಡಿಸಿಎಂ ಲಕ್ಷ್ಮಣ್ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಜಿಲ್ಲಾ ಉಸ್ತುವಾರಿಯ ಆಕಾಂಕ್ಷಿಯಾಗಿದ್ದಾರೆ.

ಅನರ್ಹಗೊಂಡಿರುವ ರಮೇಶ್‍ಜಾರಕಿ ಹೊಳಿ ಮುಂದೆ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಲೆಕ್ಕಾಚಾರ ಬಿಎಸ್‍ವೈ ಅವರಲ್ಲಿದೆ. ಅಲ್ಲದೆ, ಉಮೇಶ್‍ಕತ್ತಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ. ಒಂದು ವೇಳೆ ಅವರು ಸಂಪುಟಕ್ಕೆ ಸೇರ್ಪಡೆಯಾದರೆ ಅವರಿಗೂ ಉಸ್ತುವಾರಿ ನೀಡಬೇಕಾಗುತ್ತದೆ. ಹೀಗಾಗಿಯೇ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸರ್ಕಾರಕ್ಕೆ ಸವಾಲಾಗಿದೆ.

ಇದೇ ರೀತಿ ಗಣಿ ಜಿಲ್ಲೆ ಬಳ್ಳಾರಿಯ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಕಣ್ಣಿಟ್ಟಿದ್ದಾರೆ. ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರಿನಿಂದ ಅವರು ಗೆದ್ದಿದ್ದರೂ ತವರು ಜಿಲ್ಲೆ ಮೇಲೆ ಹಿಡಿತ ಸಾಧಿಸುವ ಲೆಕ್ಕಾಚಾರದಲ್ಲಿದ್ದಾರೆ.
ತಮಗೆ ಕಡೇ ಪಕ್ಷ ಡಿಸಿಎಂ ಸ್ಥಾನವನ್ನೂ ನೀಡಿಲ್ಲ. ಬಳ್ಳಾರಿ ಹೊಣೆಗಾರಿಕೆಯನ್ನಾದರೂ ನೀಡಬೇಕೆಂದು ಕೋರಿದ್ದಾರೆ. ಉಳಿದಂತೆ ಯಡಿಯೂರಪ್ಪ ತಮ್ಮ ತವರು ಜಿಲ್ಲೆ ಶಿವಮೊಗ್ಗವನ್ನು ತಮ್ಮಬಳಿಯೇ ಉಳಿಸಿಕೊಳ್ಳಲಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರಿಗೆ ಕೊಪ್ಪಳ ಇಲ್ಲವೆ, ದಾವಣಗೆರೆ ಉಸ್ತುವಾರಿ ವಹಿಸುವ ಸಾಧ್ಯತೆ ಇದೆ.

ಹಾವೇರಿ ಹೊಣೆಗಾರಿಕೆಯನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ನೀಡುವ ಸಾಧ್ಯತೆ ಇದೆ. ಅನರ್ಹಗೊಂಡಿರುವ ಬಿ.ಸಿ.ಪಾಟೀಲ್ ಮುಂದೆ ಸಂಪುಟಕ್ಕೆ ಸೇರ್ಪಡೆಯಾದರೆ ಬದಲಾವಣೆ ಮಾಡುವ ಸಂಭವವಿದೆ ಎಂದು ತಿಳಿದುಬಂದಿದೆ.
ಉಸ್ತುವಾರಿ ವಿವರ:
ಬಿ.ಎಸ್.ಯಡಿಯೂರಪ್ಪ-ಮುಖ್ಯಮಂತ್ರಿ- ಶಿವಮೊಗ್ಗ
ಗೋವಿಂದಕಾರಜೋಳ- ಬಾಗಲಕೋಟೆ- ವಿಜಯಪುರ,
ಡಾ.ಸಿ.ಎನ್.ಅಶ್ವತ್‍ನಾರಾಯಣ-ಮಂಡ್ಯ/ರಾಮನಗರ
ಆರ್.ಅಶೋಕ್-ಬೆಂಗಳೂರು ಮಹಾನಗರ
ವಿ.ಸೋಮಣ್ಣ-ಮೈಸೂರು
ಜೆ.ಸಿ.ಮಾಧುಸ್ವಾಮಿ-ತುಮಕೂರು
ಶ್ರೀರಾಮುಲು-ಚಿತ್ರದುರ್ಗ/ಬಳ್ಳಾರಿ
ಬಸವರಾಜಬೊಮ್ಮಾಯಿ-ಹಾವೇರಿ
ಲಕ್ಷ್ಮಣ್‍ಸವದಿ-ಬೆಳಗಾವಿ
ಕೋಟಾಶ್ರೀನಿವಾಸಪೂಜಾರಿ-ಉಡುಪಿ
ಪ್ರಭುಚೌವ್ಹಾಣ್- ಬೀದರ್
ಎಚ್.ನಾಗೇಶ್-ಕೋಲಾರ
ಜಗದೀಶ್‍ಶೆಟ್ಟರ್-ಧಾರವಾಡ
ಶಶಿಕಲಾ ಜೊಲ್ಲೆ- ರಾಯಚೂರು
ಎಸ್.ಸುರೇಶ್‍ಕುಮಾರ್-ಚಾಮರಾಜನಗರ
ಕೆ.ಎಸ್.ಈಶ್ವರಪ್ಪ-ದಾವಣಗೆರೆ/ ಕೊಪ್ಪಳ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ