ಬೆಂಗಳೂರು, ಆ.28-ಗಡಿನಾಡು ಪ್ರದೇಶದ ಶಾಸಕ ಎಸ್.ಅಂಗಾರ ಅವರು ಸತತ ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಸಂಪುಟದಲ್ಲಿ ಸ್ಥಾನಮಾನ ನೀಡದಿದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳುವುದು ಅನಿವಾರ್ಯ ಎಂದು ಕರ್ನಾಟಕ ಗಡಿ ಹೋರಾಟ ಸಮಿತಿ ಎಚ್ಚರಿಸಿದೆ.
ಅಂಗಾರ ಅವರು ಯಾವುದೇ ಆರೋಪಕ್ಕೆ ಗುರಿಯಾಗದೆ ಕಪ್ಪು ಚುಕ್ಕೆ ಬಾರದಂತೆ ಕೆಲಸ ನಿರ್ವಹಿಸಿದ್ದು, ಇಂತಹ ಸಜ್ಜನ ರಾಜಕಾರಣಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡದೆ ಅವಮಾನಿಸಿರುವುದನ್ನು ಸಮಿತಿ ಖಂಡಿಸುತ್ತದೆ.
ಈಗಲಾದರೂ ಅವರಿಗೆ ಸಂಪುಟದಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಅವಕಾಶಮಾಡಿಕೊಡಬೇಕು ಎಂದು ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದು, ಒಂದು ವೇಳೆ ಅಂಗಾರ ಅವರನ್ನು ನೇಮಕ ಮಾಡದಿದ್ದರೆ ಬಿಜೆಪಿ ವರಿಷ್ಠರವಿರುದ್ಧ ಸುಳ್ಯಾ ಮತ್ತು ಕಾಸರಗೋಡು ಗಡಿನಾಡು ಕನ್ನಡಿಗರೊಂದಿಗೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ ಎಂದು ರಾಜ್ಯಾಧ್ಯಕ್ಷ ಪೆÇ್ರ.ಬಿ.ಕೆ.ರಾ. ರಾವ್ ಬೈಂದೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತುರ್ತು ಕಾರ್ಯಾಚರಣೆಗಿಳಿಯಿರಿ:
ರಾಜ್ಯದ ಕೊಡಗು, ದಕ್ಷಿಣ ಕನ್ನಡ, ಉತ್ತರ, ವಾಯುವ್ಯ, ಈಶಾನ್ಯ ಕರ್ನಾಟಕದಲ್ಲಿ ಪ್ರಕೃತಿ ವಿಕೋಪದ ನೆರೆ ಹಾವಳಿಗೆ ತುತ್ತಾಗಿ ಸಂತ್ರಸ್ತರ ಸ್ಥಿತಿ ಕರುಣಾಜನಕವಾಗಿದ್ದು, ತಕ್ಷಣ ಈ ಭಾಗದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಆಡಳಿತಾಂಗ ಕಾರ್ಯಾಚರಣೆಗಿಳಿಯಬೇಕು ಎಂದು ಅವರು ಮನವಿ ಮಾಡಿದ್ದಾರೆ. ಎಲ್ಲಾ ಸಚಿವರು ಪಕ್ಷಭೇದಮರೆತು ತಾರತಮ್ಯ ತೋರದೆ ನೆರೆ ಸಂತ್ರಸ್ಥರ ನೆರವಿಗೆ ತೆರಳಿ ತುರ್ತು ಆಶ್ರಯ, ಬಟ್ಟೆ, ಆಹಾರ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಜಾರಕಿ ಹೊಳಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಿ:
ಗಡಿ ಹೋರಾಟ ಸಮಿತಿಯ ಮುಖಂಡರಲ್ಲೊಬ್ಬರಾದ ಬಾಲಚಂದ್ರ ಜಾರಕಿ ಹೊಳಿ ಅವರನ್ನು ಕೆಎಂಎಫ್ ಅಧ್ಯಕ್ಷರಾಗಿ ಆಯ್ಕೆ ಮಾಡಬೇಕೆಂದು ಇದೇ ವೇಳೆ ಅವರು ಮನವಿ ಮಾಡಿದ್ದಾರೆ.