ಪುಣೆ, ಆ.27- ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗಲು ಪಾಕಿಸ್ತಾನ ಕೃಪಾಪೆಷಿತ ಭಯೋತ್ಪಾದಕರು ಕುತಂತ್ರಗಳನ್ನು ರೂಪಿಸುತ್ತಿದ್ಧಾರೆ. ಜೈಷ್-ಎ-ಮಹಮದ್(ಜೆಇಎಂ) ಉಗ್ರಗಾಮಿ ಸಂಘಟನೆಯ ಉಗ್ರರು ಜಲಗರ್ಭದ ಮೂಲಕ ಭಾರತದ ನೌಕಾನೆಲೆಗಳ ಮೇಲೆ ದಾಳಿಗೂ ತರಬೇತಿ ಪಡೆಯುತ್ತಿದ್ದಾರೆ.
ಜೆಇಎಂ ಭಯೋತ್ಪಾದಕರ ಅಂಡರ್ವಾಟರ್ ಅಟ್ಯಾಕ್ನನ್ನು ಸಮರ್ಥವಾಗಿ ಎದುರಿಸಿ ಆಂಥ ದಾಳಿಗಳನ್ನು ಸಂಪೂರ್ಣವಾಗಿ ವಿಫಲಗೊಳಿಸಲು ಭಾರತೀಯ ನೌಕಾಪಡೆ ಸರ್ವಸನ್ನದ್ದವಾಗಿದೆ ಎಂದು ಇಂಡಿಯನ್ ನೇವಿ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಹೇಳಿದ್ದಾರೆ.
ಜೆಇಎಂ ಸಂಘಟನೆಯ ಅಂಡರ್ವಾಟರ್ ವಿಂಗ್ ಅಂತರ್ಜಲದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಜ್ಜಾಗುತ್ತಿದ್ದಾರೆ ಎಂಬ ಬಗ್ಗೆ ನಮಗೆ ಗುಪ್ತಚರ ಮಾಹಿತಿ ಲಭಿಸಿದೆ. ಆದರೆ ಅಂಥ ಯಾವುದೇ ಕುತಂತ್ರದ ಯೋಜನೆ ಯಶಸ್ವಿಯಾಗಲು ನಾವು ಬಿಡುವುದಿಲ್ಲ. ನಮ್ಮ ನೌಕಾ ಯೋಧರು ಕಟ್ಟೆಚ್ಚರದಿಂದ ಇದ್ದಾರೆ. ಈ ರೀತಿಯ ಯಾವುದೇ ಜಲಗರ್ಭ ದಾಳಿಗಳನ್ನು ಹತ್ತಿಕ್ಕಲ್ಲು ಸನ್ನದ್ಧರಾಗಿದ್ದಾರೆ ಎಂದು ಆಡ್ಮಿರಲ್ ಸಿಂಗ್ ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದ ಪುಣೆ ವಿಶ್ವವಿದ್ಯಾಲಯದಲ್ಲಿ ಏರ್ಪಡಿಸಿದ್ದ ಜನರಲ್ ಬಿ.ಸಿ.ಜೋಷಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ನೌಕಾಪಡೆ ಮುಖ್ಯಸ್ಥರು ನಮ್ಮ ನೌಕಾಪಡೆ, ಮತ್ತು ಕರಾವಳಿ ರಕ್ಷಣಾ ದಳ ಅತ್ಯಂತ ಬಲಿಷ್ಠ ಮತ್ತು ಸಮರ್ಥವಾಗಿವೆ. ನಮ್ಮ ಜಲ ಸರಹದ್ದಿನೊಳಗೆ ಶತ್ರುಗಳು ಅಷ್ಟು ಸುಲಭವಾಗಿ ಪ್ರವೇಶಿಸಿ ದಾಳಿ ನಡೆಸಲು ಸಾಧ್ಯವಿಲ್ಲ. ಇಂಥ ಯಾವುದೇ ಪ್ರಯತ್ನಕ್ಕೆ ಉಗ್ರರು ಭಾರೀ ಬೆಲೆ ತೆರೆಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.