ಬೆಂಗಳೂರು, ಆ.27- ಸರ್ಕಾರಗಳ ತೆರಿಗೆ ನೀತಿ, ನೆರೆ ಹಾಗೂ ಇತರ ಕಾರಣಗಳಿಂದಾಗಿ ಸುಮಾರು ಐದರಿಂದ ಆರು ಸಾವಿರ ಕೈಗಾರಿಕೆಗಳು ನಷ್ಟದಲ್ಲಿದ್ದು, ಅವುಗಳು ಮುಚ್ಚಿದರೆ 20ರಿಂದ 25ಲಕ್ಷ ಮಂದಿ ಉದ್ಯೋಗ ಕಳೆದುಕೊಳ್ಳುವ ಆತಂಕವಿದೆ ಎಂದು ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಆರ್.ರಾಜು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೈಗಾರಿಕೆಗಳು ಸಂಕಷ್ಟಕ್ಕೆ ಸಿಲುಕಲು ಹಲವಾರು ಕಾರಣಗಳಿವೆ. ಪ್ರಮುಖವಾಗಿ ಆಟೋಮೊಬೈಲ್, ಜವಳಿ ಕ್ಷೇತ್ರದ ಉದ್ದಿಮೆಗಳು ನಷ್ಟದಲ್ಲಿವೆ.ರಾಜ್ಯಾದ್ಯಂತ ಸಣ್ಣ ಕೈಗಾರಿಕೆಗಳು ಸುಮಾರು 60ಲಕ್ಷಕ್ಕೂ ಮೇಲ್ಪಟ್ಟ ಉದ್ಯೋಗಗಳನ್ನು ಸೃಷ್ಟಿಸಿವೆ. ಪ್ರಸ್ತುತ ಸಂದರ್ಭದಲ್ಲಿ ಅದರಲ್ಲಿ 20ರಿಂದ 25 ಲಕ್ಷ ಉದ್ಯೋಗಗಳು ಖೋತ ಆಗುವ ಆತಂಕವಿದೆ. ಬೆಂಗಳೂರಿನಲ್ಲೇ ಸುಮಾರು 10ರಿಂದ 12 ಲಕ್ಷ ಉದ್ಯೋಗಗಳು ನಷ್ಟವಾಗಬಹುದು ಎಂದು ಅಂದಾಜಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಪರಿಸರ ಸ್ನೇಹಿ ವಾಹನಗಳಾದ ಎಲೆಕ್ಟ್ರಿಕ್ ಮತ್ತು ಸೋಲಾರ್ ಚಾಲಿತ ವಾಹನಗಳನ್ನು ಬೆಂಬಲಿಸಲು ಜಿಎಸ್ಟಿ ತೆರಿಗೆಯನ್ನು ಶೇ.5ಕ್ಕೆ ಇಳಿಸಿದೆ.ಇದರಿಂದ ಡೀಸೆಲ್ ವಾಹನಗಳ ಮಾರಾಟ ಕುಸಿದಿದೆ ಎಂದರು.
ಪರಿಸರ ಸ್ನೇಹಿ ವಾಹನಗಳ ಪರಿಚಯಿಸುವುದು ಒಳ್ಳೆಯ ನಿರ್ಧಾರ.ಆದರೆ, ಏಕಾಏಕಿ ತೀರ್ಮಾನಗಳನ್ನು ಪ್ರಕಟಿಸಿದ್ದರಿಂದ್ದ ಸಾಂಪ್ರದಾಯಿಕ ಉದ್ಯಮಕ್ಕೆ ಹೊಡೆತ ಬಿದ್ದಿದೆ.ಇನ್ನು ಕರ್ನಾಟಕದಲ್ಲಿ ನೆರೆ ಹಾಗೂ ಪ್ರವಾಹದಿಂದಾಗಿ ಕೈಗಾರಿಕೆಗಳಿಗೆ ಸಾಕಷ್ಟು ನಷ್ಟವಾಗಿದೆ.ಕೇಂದ್ರ ಸರ್ಕಾರದ ತೆರಿಗೆ ನೀತಿಯಿಂದಲೂ ಸಮಸ್ಯೆಯಾಗಿದೆ.ಆದರೆ, ಒಂದು ಕಾರಣಕ್ಕಾಗಿ ಕೈಗಾರಿಕೆಗಳು ಮುಚ್ಚುತ್ತಿವೆ ಎಂದು ಹೇಳಲು ಸಾಧ್ಯವಿಲ್ಲ. ಕನಿಷ್ಠ ವೇತನ ನೀತಿಯಿಂದಲೂ ಉದ್ಯಮಗಳಿಗೆ ಹೊಡೆತ ಬಿದ್ದಿವೆ. 7ರಿಂದ 8ಸಾವಿರ ವೇತನ ನೀಡಬೇಕಾದ ಜಾಗದಲ್ಲಿ 15 ಸಾವಿರ ಕನಿಷ್ಠ ವೇತನ ನೀಡುವಂತೆ ಒತ್ತಡ ಹಾಕಿದರೆ ಉದ್ಯಮಗಳಿಗೆ ನಷ್ಟವಾಗಲಿದೆ.ಬಹಳಷ್ಟು ಜವಳಿ ಉದ್ಯಮಗಳು ಬೆಂಗಳೂರು ಬಿಟ್ಟು ಬಾಂಗ್ಲಾದೇಶಕ್ಕೆ ವಲಸೆ ಹೋಗಿವೆ ಎಂದು ಹೇಳಿದರು.
ಕೇಂದ್ರ ಸರ್ಕಾರ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳ ಸ್ವರೂಪವನ್ನು ಬದಲಾವಣೆ ಮಾಡಲು ಮುಂದಾಗಿದೆ.ಇದರಿಂದ ಸಣ್ಣ ಕೈಗಾರಿಕೆಗಳ ವಹಿವಾಟು ಗಾತ್ರ ಹೆಚ್ಚಾಗಲಿದೆ. ಉತ್ಪಾದಕ ಸಂಸ್ಥೆಗಳಿಗಿಂತಲೂ ವಹಿವಾಟು ಉದ್ಯಮಗಳು ಸಣ್ಣ ಕೈಗಾರಿಕೆಗಳ ವ್ಯಾಪ್ತಿಗೆ ಒಳಪಡಲಿದೆ. ಸರ್ಕಾರದ ಸೌಲಭ್ಯಗಳು ಅವರಿಗೆ ಲಭ್ಯವಾಗಲಿವೆ. ಉತ್ಪಾದನಾ ವಲಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.
ಸರ್ಕಾರಗಳು 30 ದಿನಗಳ ಒಳಗೆ ಜಿಎಸ್ಟಿ ತೆರಿಗೆಯನ್ನು ಮರು ಪಾವತಿಸಬೇಕು.ಅಭಿವೃದ್ಧಿ ಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿ ಕಡಿಮೆ ಬೆಲೆಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು.ಕನಿಷ್ಠ ವೇತನ ನೀತಿಯನ್ನು ಸರಳೀಕರಣ ಮಾಡಬೇಕು. ಪರಿಸರ ಸ್ನೇಹಿ ವಾಹನಗಳಿಗೆ ಪರಿವರ್ತನೆಯಾಗುವ ಸಂದರ್ಭದಲ್ಲಿ ಉಂಟಾಗುವ ಆರ್ಥಿಕ ಹೊರೆಯನ್ನು ನಿಭಾಯಿಸಲು ಸರ್ಕಾರ ಕೈಗಾರಿಕೆಗಳಿಗೆ ಬೆಂಬಲ ನೀಡಬೇಕು ಎಂದು ಅವರು ಒತ್ತಾಯಿಸಿದರು.