ಹಿಂದುಳಿದ ವರ್ಗವನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದೆ-ಜೆಡಿಎಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ರಮೇಶ್‍ಬಾಬು

ಬೆಂಗಳೂರು, ಆ.27-ಹಿಂದುಳಿದ ಜಾತಿ ಮತ್ತು ವರ್ಗಗಳಿಗೆ ಸಂಪುಟದಲ್ಲಿ ಸೂಕ್ತ ಸ್ಥಾನ ಮಾನ ನೀಡಲು ವಿಫಲವಾಗಿರುವ ಬಿಜೆಪಿ ಉಪಮುಖ್ಯಮಂತ್ರಿಗಳ ನೇಮಕದಲ್ಲೂ ಅವಕಾಶ ನೀಡದೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದೆ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ ಹಾಗೂ ರಾಷ್ಟ್ರೀಯ ವಕ್ತಾರ ರಮೇಶ್‍ಬಾಬು ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಅವರ ಜನ್ಮ ದಿನದಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಿ ಕೇವಲ ಇಬ್ಬರು ಹಿಂದುಳಿದ ವರ್ಗಗಳ ಪ್ರತಿನಿಧಿಗಳನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದರು. ಆಗಲೂ ಈ ವರ್ಗಕ್ಕೆ ಸೂಕ್ತ ಪ್ರಾತಿನಿಧ್ಯ ನೀಡಲಿಲ್ಲ ಎಂದು ಪತ್ರಿಕಾಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

ಮೂರು ಮಂದಿ ಉಪಮುಖ್ಯಮಂತ್ರಿಗಳಿಗೆ ಜಾತಿವಾರು ಪ್ರಾತಿನಿಧ್ಯ ನೀಡಿರುವ ಬಿಜೆಪಿ ಸರ್ಕಾರ ಒಂದೇ ಸಮುದಾಯಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಸ್ಥಾನ ಕಲ್ಪಿಸಿರುವುದು ಆಶ್ಚರ್ಯಕರವಾಗಿದೆ ಎಂದಿದ್ದಾರೆ.
ಹಿಂದುಳಿದ ವರ್ಗದ ಪ್ರತಿನಿಧಿಗಳಾದ ಕೆ.ಎಸ್.ಈಶ್ವರಪ್ಪ ಮತ್ತು ಕೋಟಾ ಶ್ರೀನಿವಾಸಪೂಜಾರಿ ಅವರಿಗೆ ಸಂಪುಟದಲ್ಲಿ ಸ್ಥಾನ ದೊರೆತಿದೆಯೇ ಹೊರತು ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಿಲ್ಲ. ಹಿಂದುಳಿದ ವರ್ಗವನ್ನು ಬಿಜೆಪಿ ನಿರ್ಲಕ್ಷ್ಯ ಮಾಡಿದೆ ಎಂದು ಟೀಕಿಸಿರುವ ಅವರು, ರಾಜ್ಯದಿಂದ ಆಯ್ಕೆಯಾಗಿರುವ ಹಿಂದುಳಿದ ವರ್ಗದ ಏಕೈಕ ಲೋಕಸಭಾ ಸದಸ್ಯ ಪಿ.ಸಿ.ಮೋಹನ್ ಅವರಿಗೂ ಕೇಂದ್ರ ಸರ್ಕಾರದಲ್ಲಿ ಸಚಿವ ಸ್ಥಾನ ನೀಡಿಲ್ಲ. ಬಿಜೆಪಿಯ ಇಂತಹ ಹುನ್ನಾರವನ್ನು ಹಿಂದುಳಿದ ಜಾತಿ ಮತ್ತು ವರ್ಗಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ