ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ದಂಡ ವಿಧಿಸುವುದರ ಜತೆಗೆ ಶಿಸ್ತುಕ್ರಮ-ಮೇಯರ್ ಗಂಗಾಂಬಿಕೆ

ಬೆಂಗಳೂರು, ಆ.27- ಕಾರಣವಿಲ್ಲದೆ ಪಾಲಿಕೆ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ದಂಡ ವಿಧಿಸುವ ಜತೆಗೆ ಶಿಸ್ತುಕ್ರಮ ಕೈಗೊಳ್ಳಲು ಆಯುಕ್ತರಿಗೆ ಸೂಚನೆ ನೀಡುವುದಾಗಿ ಮೇಯರ್ ಗಂಗಾಂಬಿಕೆ ತಿಳಿಸಿದರು.

ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರೆಲ್ಲ ಆಗಮಿಸಿದರೂ ಅಧಿಕಾರಿಗಳ ಗ್ಯಾಲರಿ ಖಾಲಿ ಖಾಲಿಯಾಗಿತ್ತು.ಬೆರಳೆಣಿಕೆಯಷ್ಟು ಮಂದಿ ಇದ್ದರು.
ಇದನ್ನು ಕಂಡು ಆಕ್ರೋಶಗೊಂಡ ಕಾಂಗ್ರೆಸ್ ಹಿರಿಯ ಶಾಸಕ ಗುಣಶೇಖರ್ ನಾವು ತಿಂಗಳಿಗೊಂದು ಸಾಮಾನ್ಯ ಸಭೆ ನಡೆಸುವುದು. ಸಭೆ ನಡೆಸುವ ಬಗ್ಗೆ ನೋಟಿಸ್ ಹೋಗಿದ್ದರೂ ಕೂಡ ಅಧಿಕಾರಿಗಳು ಗೈರಾಗಿರುವುದು ಪ್ರಜಾಪ್ರಭುತ್ವದಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಖಂಡಿಸಿ ನಾನು ವಾಕೌಟ್ ಮಾಡುತ್ತೇನೆ ಎಂದು ಹೊರಟರು.

ತಕ್ಷಣ ಮೇಯರ್ ಗಂಗಾಂಬಿಕೆ ಅವರು ಗುಣಶೇಖರ್ ಅವರನ್ನು ವಾಪಸು ಕರೆದು ಕೆಲವು ಅಧಿಕಾರಿಗಳು ಕಾರಣ ಹೇಳಿ ಸಭೆಗೆ ಬಂದಿಲ್ಲ. ಮತ್ತೆ ಕೆಲವರು ವಿನಾಕಾರಣ ಆಗಮಿಸಿಲ್ಲ. ಅಂತಹವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಆಗ ಮತ್ತೆ ಮಾತನಾಡಿದ ಗುಣಶೇಖರ್, ಕೇವಲ ಶಿಸ್ತುಕ್ರಮ ತೆಗೆದುಕೊಂಡರೆ ಸಾಕಾಗುವುದಿಲ್ಲ. ಗೈರು ಹಾಜರಾದ ಅಧಿಕಾರಿಗಳಿಗೆ 5 ಸಾವಿರ ರೂ.ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್, ಅನಾವಶ್ಯಕವಾಗಿ ಗೈರು ಹಾಜರಾದ ಅಧಿಕಾರಿಗಳ ವಿರುದ್ಧ ದಂಡ ವಿಧಿಸುವುದರ ಜತೆಗೆ ಶಿಸ್ತುಕ್ರಮವನ್ನೂ ತೆಗೆದುಕೊಳ್ಳುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ