ಚೆನ್ನೈ, ಆ.27- ಮಹತ್ವಾಕಾಂಕ್ಷಿ ಚಂದ್ರಯಾನ್-2 ಸೇರಿದಂತೆ ಅಂತರಿಕ್ಷದಲ್ಲಿ ಯಶಸ್ವಿ ಯಾನ-ಅಭಿಯಾನದ ಮೂಲಕ ವಿಶ್ವವನ್ನೇ ನಿಬ್ಬೆರಗಾಗಿಸಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಮತ್ತೊಂದು ಮೈಲಿಗಲ್ಲಿನ ಸಾಧನೆಗೆ ಸಜ್ಜಾಗಿದೆ.
ಭೂಮಿಯ ಮೇಲೆ ಕಣ್ಣಿಡುವ (ಅರ್ಥ್ ಅಬ್ಸರ್ವೇಷನ್) ಅಥವಾ ದೂರ ಸಂವೇದಿ(ರಿಮೋಟ್ ಸೆನ್ಸಿಂಗ್) ಉಪಗ್ರಹ ಕಾರ್ಟೊಸ್ಯಾಟ್-3 ಉಡಾವಣೆಗೆ ಇಸ್ರೋ ಸಿದ್ಧತೆ ನಡೆಸಿದೆ. ಈ ಸುಧಾರಿತ ಉಪಗ್ರಹ ಅಕ್ಟೋಬರ್ ಅಂತ್ಯ ಅಥವಾ ನವೆಂಬರ್ ಆರಂಭದಲ್ಲಿ ಉಡಾವಣೆಯಾಗಲಿದೆ
ಇದು ಕಾರ್ಟೊಗ್ರಫಿ ಉಪಗ್ರಹದ ತೃತೀಯ ಶ್ರೇಣಿಯಾಗಿದೆ. ಇದು ಭೂಮಿಯ ಮೇಲೆ ನಿಗಾ ವಹಿಸುವ ಉಪಗ್ರಹವಾಗಿದೆ. ಅಕ್ಟೋಬರ್ ಅಥವಾ ನವೆಂಬರ್ನಲ್ಲಿ ಕಾರ್ಟೊಸ್ಯಾಟ್-3 ಉಡ್ಡಯನವಾಗಲಿದೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪೊಲಾರ್ ಸ್ಯಾಟಿಲೈಟ್ ಲಾಂಚ್ ವಹಿಕಲ್ (ಪಿಎಸ್ಎಲ್ವಿ) ರಾಕೆಟ್ ಮೂಲಕ ಕಾರ್ಟೊಸ್ಯಾಟ್-3 ಉಪಗ್ರಹವನ್ನು ಉಡಾವಣೆ ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಭೂ ವೀಕ್ಷಣೆ ಅಥವಾ ದೂರ ಸಂವೇದಿ ಉಪಗ್ರಹವಾದ ಕಾರ್ಟೊಸ್ಯಾಟ್ ಸುಧಾರಿತ ನಮೂನೆಯದ್ದಾಗಿದೆ. ಈ ಹಿಂದಿನ ಉಪಗ್ರಹ (ಕಾರ್ಟೊಸ್ಯಾಟ್-2)ಕ್ಕಿಂತಲೂ ಇದು ಅತ್ಯಾಧುನಿಕವಾಗಿದೆ. ಅಂತರಿಕ್ಷದಿಂದ ಭೂಮಿಯ ಯಾವುದೇ ಭಾಗವನ್ನು ಅತ್ಯಂತ ಸೂಕ್ಷ್ಮ ಮತ್ತು ನಿಖರವಾಗಿ ಸ್ಕ್ಯಾನ್ ಮಾಡಿ ಸ್ಪಷ್ಟ ಚಿತ್ರವನ್ನು ಇದು ರವಾನಿಸಲಿದೆ. ಇದೊಂದು ರೀತಿ ಅಂತರಿಕ್ಷದ ಕಣ್ಣು ಅಥವಾ ಬೇಹುಗಾರಿಕೆ ಉಪಗ್ರಹವಾಗಿ ಕಾರ್ಯನಿರ್ವಹಿಸಲಿದೆ.
ಇಸ್ರೋದ ಚಂದ್ರಯಾನ್-2 ನಿರೀಕ್ಷೆಯಲ್ಲಿ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಾ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ನಿನ್ನೆಯಷ್ಟೇ ಚಂದ್ರಯಾನ-2 ನೌಕೆ ಚಂದಿರನ ಮೇಲ್ಮೈನಲ್ಲಿನ ಹಳ್ಳಗಳ ಚಿತ್ರಗಳನ್ನು ಭೂಮಿಗೆ ರವಾನಿಸಿತ್ತು.